ದಿಲ್ಲಿ ಹೈಕೋರ್ಟ್: ಸಿಬಿಎಸ್ಇ ಡಿಜಿಟಲ್ ಮೌಲ್ಯಮಾಪನ ಅಕ್ರಮ ತನಿಖೆ ಕೋರಿದ ಅರ್ಜಿಗೆ ಕೋರ್ಟ್ ನೋಟಿಸ್!

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ‘ಆನ್-ಸ್ಟೀನ್ ಮಾರ್ಕಿಂಗ್’ (OSM)ಗೆ ಸಂಬಂಧಿಸಿದ ಅಕ್ರಮಗಳು, ತಾಂತ್ರಿಕ ನ್ಯೂನತೆಗಳು ಮತ್ತು ಕುಂದುಕೊರತೆಗಳ ನಿವಾರಣೆಯಲ್ಲಿನ ವೈಫಲ್ಯಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರದಲ್ಲಿ ದಿಲ್ಲಿ ಹೈಕೋರ್ಟ್ ಸೋಮವಾರ ಸಂಬಂಧಿತ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ಆನ್-ಸ್ಟೀನ್ ಮಾರ್ಕಿಂಗ್ ಮೌಲ್ಯಮಾಪನ ವ್ಯವಸ್ಥೆಯಿಂದಾಗಿ 12ನೇ ತರಗತಿಯ ವಿದ್ಯಾರ್ಥಿಗಳು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರತಿಪಕ್ಷ ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಪೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ, ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಮಧು ಜೈನ್ ಅವರನ್ನು ಒಳಗೊಂಡ ರಜಾಕಾಲದ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು CBSEಗೆ ನೋಟಿಸ್ ಜಾರಿಗೊಳಿಸಿತು.
ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜೂನ್ 12ಕ್ಕೆ ನಿಗದಿಪಡಿಸಿತು.
ರಾಜಕೀಯ ಪಕ್ಷವೊಂದರ ವಿದ್ಯಾರ್ಥಿ ಘಟಕವು ಈ ಅರ್ಜಿಯನ್ನು ಸಲ್ಲಿಸಿರುವುದರಿಂದ ಇದರ ಸಿಂಧುತ್ವ ಪ್ರಶ್ನಾರ್ಹವಾಗಿದೆ ಎಂದು CBSE ಪರ ವಕೀಲ ಎಂ.ಎ. ನಿಯಾಜಿ ವಾದಿಸಿದರು. ಶೈಕ್ಷಣಿಕ ವಿಷಯಗಳನ್ನು ರಾಜಕೀಯಗೊಳಿಸಬಾರದು ಎಂದೂ ಅವರು ಹೇಳಿದರು.
ಮೇ 13ರಂದು CBSE 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡ ಬಳಿಕ, OSM ವ್ಯವಸ್ಥೆಯ ಲೋಪದೋಷಗಳು ಭಾರೀ ಪ್ರಮಾಣದಲ್ಲಿ ಹೊರಬಿದ್ದಿವೆ. ತಾಂತ್ರಿಕ ದೋಷಗಳು, ಮಸುಕಾದ ಸ್ಕ್ಯಾನ್ ಗಳು, ಮೌಲ್ಯಮಾಪನದಲ್ಲಿನ ವ್ಯತ್ಯಾಸಗಳು ಹಾಗೂ ದತ್ತಾಂಶ ಸುರಕ್ಷತೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಆತಂಕಗಳನ್ನು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವ್ಯಕ್ತಪಡಿಸಿದ್ದಾರೆ.
ಮೌಲ್ಯಮಾಪಕರು ಉತ್ತರ ಪತ್ರಿಕೆಗಳನ್ನು ಕೈಯಿಂದ ಪರಿಶೀಲಿಸುವ ಬದಲಿಗೆ, ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆನ್ಲೈನ್ನಲ್ಲಿ ಪರಿಶೀಲಿಸುವ ಈ ವ್ಯವಸ್ಥೆಯು ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ಫೆಬ್ರುವರಿ 17ರಂದು ಮಂಡಳಿಯ ಪರೀಕ್ಷೆಗಳು ಆರಂಭವಾಗುವ 74 ದಿನಗಳ ಮೊದಲು, ಅಂದರೆ ಡಿಸೆಂಬರ್ 5ರಂದು ಈ ರೀತಿಯ ಮೌಲ್ಯಮಾಪನ ವ್ಯವಸ್ಥೆಯ ಗುತ್ತಿಗೆಯನ್ನು ‘ಕೋಎಂಪ್ಟ್ ಎಜು ಟೆಕ್’ ಸಂಸ್ಥೆಗೆ ನೀಡಲಾಗಿತ್ತು.
ಮಂಡಳಿಯು ಪದೇ ಪದೇ ನೀಡುತ್ತಿರುವ ಸಾರ್ವಜನಿಕ ಸ್ಪಷ್ಟಿಕರಣಗಳು ಮೌಲ್ಯಮಾಪನ ವ್ಯವಸ್ಥೆಯ ಪ್ರಾಮಾಣಿಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳನ್ನು ಮೂಡಿಸಿವೆ ಎಂದು NSUI ಮುಖ್ಯಸ್ಥ ವಿನೋದ್ ಜಾರ್ಖ ಅರ್ಜಿಯಲ್ಲಿ ಹೇಳಿದ್ದಾರೆ.