ಕಾಂಗೋದಲ್ಲಿ ಭೀಕರ ಜನಾಂಗೀಯ ಸಂಘರ್ಷ: ಸಶಸ್ತ್ರ ಗುಂಪುಗಳ ನಡುವಿನ ಕಾಳಗಕ್ಕೆ 69 ಮಂದಿ ಬಲಿ

ಕಿನ್ನಾಸ: ಕಾಂಗೋ ಗಣರಾಜ್ಯದಲ್ಲಿ ಆಂತರಿಕ ಘರ್ಷಣೆ ಭುಗಿಲೆದ್ದಿದ್ದು ಎರಡು ಸಶಸ್ತ್ರ ಹೋರಾಟಗಾರರ ಗುಂಪಿನ ನಡುವಿನ ಸಂಘರ್ಷದಲ್ಲಿ 69 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹೆಮಾ ಮತ್ತು ಲೆಂಡು ಜನಾಂಗೀಯ ಗುಂಪುಗಳಿಗೆ ಸಂಬಂಧಿಸಿದ ಸಶಸ್ತ್ರ ಹೋರಾಟಗಾರರ ನಡುವಿನ ಹೋರಾಟವು ತೀವ್ರಗೊಂಡಿರುವುದರಿಂದ ಕಾಂಗೋ ಗಣರಾಜ್ಯದಲ್ಲಿ ಅಶಾಂತಿ ಮತ್ತು ಅರಾಜಕತೆಯ ಪರಿಸ್ಥಿತಿಯಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಲೆಂಡು ಜನಾಂಗೀಯ ಗುಂಪಿನ ಪರ ಹೋರಾಡುತ್ತಿರುವುದಾಗಿ ಹೇಳಿಕೊಂಡಿರುವ ಕೊಡೆಕೊ ಸಶಸ್ತ್ರ ಹೋರಾಟಗಾರರ ಗುಂಪು ಹಲವು ಗ್ರಾಮಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿರುವುದಾಗಿ ವರದಿ ಹೇಳಿದೆ.
