ಬೆಂಗಳೂರು: ಪೋಷಕರೊಂದಿಗೆ ಜಗಳ; 5ನೇ ಮಹಡಿಯಿಂದ ಜಿಗಿಯಲು ನಿಂತಿದ್ದ ಬಾಲಕಿಯ ಪವಾಡಸದೃಶ ರಕ್ಷಣೆ!

ಬೆಂಗಳೂರು : ಪೋಷಕರೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ 16 ವರ್ಷದ ಬಾಲಕಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಆರ್‌ಐ ಲೇಔಟ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಈ ಹೈಡ್ರಾಮಾ ನಡೆದಿದೆ.

ಘಟನೆಯ ವಿವರ: ಮುಂಜಾನೆ 11.30 ರ ಸುಮಾರಿಗೆ 16 ವರ್ಷದ ಬಾಲಕಿಯೊಬ್ಬಳು ತಾನು ವಾಸವಿದ್ದ ಅಪಾರ್ಟ್‌ಮೆಂಟ್ ಕಟ್ಟಡದ 5ನೇ ಮಹಡಿಯ ತುದಿಗೆ ಬಂದು ನಿಂತು ತೀವ್ರವಾಗಿ ಕಿರುಚಾಡಲು ತೊಡಗಿದ್ದಾಳೆ. “ನಾನು ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಜೋರಾಗಿ ಕೂಗಾಡುತ್ತಿದ್ದ ಬಾಲಕಿಯನ್ನು ಕಂಡು ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಆವರಿಸಿತ್ತು.
ಕ್ಷಣಾರ್ಧದಲ್ಲಿ ಧಾವಿಸಿದ ರಕ್ಷಣಾ ಪಡೆ: ಅಪಾರ್ಟ್‌ಮೆಂಟ್ ನಿವಾಸಿಗಳು ವಿಳಂಬ ಮಾಡದೆ ತಕ್ಷಣವೇ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ರಾಮಮೂರ್ತಿನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಬಾಲಕಿಯ ಗಮನ ಬೇರೆಡೆ ಸೆಳೆದು ಅತ್ಯಂತ ಜಾಣ್ಮೆಯಿಂದ ಆಕೆಯನ್ನು ಹಿಡಿದು ಸುರಕ್ಷಿತವಾಗಿ ಒಳಕ್ಕೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪೋಷಕರೊಂದಿಗೆ ನಡೆದ ಸಣ್ಣ ಜಗಳವೇ ಬಾಲಕಿಯ ಈ ತೀವ್ರ ನಿರ್ಧಾರಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆ ಯತ್ನದ ನಿಖರ ಕಾರಣಗಳ ಕುರಿತು ಪೊಲೀಸರು ಪೋಷಕರು ಹಾಗೂ ಬಾಲಕಿಗೆ ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.