ಪಲರುವಿ ಎಕ್ಸ್‌ಪ್ರೆಸ್‌ನಲ್ಲಿ ಬಾಲಕಿ ಮೇಲೆ ದೌರ್ಜನ್ಯ: ಮಹಿಳಾ ಪ್ರಯಾಣಿಕಳ ಸಮಯಪ್ರಜ್ಞೆಯಿಂದ ಪೋಕ್ಸೋ ಆರೋಪಿ ಅರೆಸ್ಟ್

ಕೇರಳ : ಪಲರುವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಐದೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಲ್ಲಂ ಮೂಲದ ಸನೀಶ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಈತನನ್ನು ಪುನಲೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೊಟ್ಟಾರಕ್ಕರ ಉಪ ಜೈಲಿಗೆ ಕಳುಹಿಸಲಾಗಿದೆ.

ಘಟನೆ ಹಿನ್ನೆಲೆ: ಮೇ 7 ರಂದು ಬೆಳಗಿನ ಜಾವ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ತೆಂಕಸಿ ಮೂಲದ 30 ಸದಸ್ಯರ ಯಾತ್ರಾರ್ಥಿಗಳ ತಂಡವೊಂದು ಎಡತುವಾ ಚರ್ಚ್‌ಗೆ ಭೇಟಿ ನೀಡಿ ಮರಳುತ್ತಿತ್ತು. ಬಾಲಕಿಯು ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ತನ್ನ ಅಜ್ಜನ ಪಕ್ಕದಲ್ಲಿ ನೆಲದ ಮೇಲೆ ಮಲಗಿದ್ದಳು. ಇದೇ ವೇಳೆ ರೈಲು ಹತ್ತಿದ್ದ ಆರೋಪಿ ಸನೀಶ್, ಮಗು ಮಲಗಿದ್ದ ಜಾಗಕ್ಕೆ ಬಂದು ದೌರ್ಜನ್ಯ ಎಸಗಿದ್ದಾನೆ.
ವೀಣಾ ಅವರ ಕೆಚ್ಚೆದೆಯ ನಿರ್ಧಾರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೀಣಾ ಎಂಬ ಮಹಿಳೆಯ ಸಮಯಪ್ರಜ್ಞೆಯಿಂದ ಈ ಕೃತ್ಯ ಬಯಲಾಗಿದೆ. “ಆರೋಪಿ ಮೊದಲು ನನಗೂ ತೊಂದರೆ ನೀಡಲು ಯತ್ನಿಸಿದಾಗ ನಾನು ಗದರಿಸಿದ್ದೆ. ನಂತರ ನಿದ್ರೆ ಬಾರದೆ ಎಚ್ಚರವಾಗಿದ್ದಾಗ, ಈತ ಮಗುವನ್ನು ಎತ್ತಿಕೊಂಡು ಹೋಗಿ ಬೆಡ್‌ಶೀಟ್‌ನಿಂದ ಮುಚ್ಚಿ ವಿಕೃತವಾಗಿ ವರ್ತಿಸುತ್ತಿರುವುದನ್ನು ಗಮನಿಸಿದೆ. ಮೊದಲು ಆತ ಮಗುವಿನ ತಂದೆ ಇರಬಹುದೆಂದು ಭಾವಿಸಿದ್ದೆ, ಆದರೆ ವಿಚಾರಿಸಿದಾಗ ಆತ ಕೊಲ್ಲಂನಿಂದ ರೈಲು ಹತ್ತಿದ ಅಪರಿಚಿತನೆಂದು ತಿಳಿಯಿತು” ಎಂದು ವೀಣಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೂಡಲೇ ಅವರು ತನ್ನ ಮೊಬೈಲ್‌ನಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿ, ಇತರ ಪ್ರಯಾಣಿಕರನ್ನು ಎಚ್ಚರಿಸಿ ಸನೀಶ್‌ನನ್ನು ಸೆಂಗೊಟ್ಟೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆ ಮತ್ತು ಬಂಧನ: ಆರಂಭದಲ್ಲಿ ಬಾಲಕಿಯ ಕುಟುಂಬ ದೂರು ನೀಡಲು ಹಿಂದೇಟು ಹಾಕಿ ಮನೆಗೆ ಮರಳಿತ್ತು. ಇದರಿಂದ ಆರೋಪಿ ಬಿಡುಗಡೆಯಾಗುವ ಸಾಧ್ಯತೆಯಿತ್ತು. ಆದರೆ, ಘಟನೆಯ ಗಂಭೀರತೆ ಅರಿತ ಪುನಲೂರು ರೈಲ್ವೆ ಪೊಲೀಸರು, ವೀಣಾ ಅವರು ರೆಕಾರ್ಡ್ ಮಾಡಿದ್ದ ವೀಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದರು. ಮಹಿಳಾ ಅಧಿಕಾರಿಯೊಬ್ಬರು ತೆಂಕಾಸಿಗೆ ಹೋಗಿ ಕುಟುಂಬದ ಮನವೊಲಿಸಿ ದೂರು ದಾಖಲಿಸಿದರು. ಸಿಸಿಟಿವಿ ಮತ್ತು ವೀಡಿಯೋ ಆಧಾರದ ಮೇಲೆ ಕೊಲ್ಲಂನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯ ಮೇಲೆ ಪೋಕ್ಸೋ (POCSO) ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣಗಳನ್ನು ದಾಖಲಿಸಲಾಗಿದೆ.