ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗೆ ಕನ್ನ: ವ್ಯಕ್ತಿಯ ಖಾತೆಯಿಂದ ₹1.27 ಲಕ್ಷ ಎಗರಿಸಿದ ಸೈಬರ್ ವಂಚಕರು!

ಮಂಗಳೂರು : ಮೊಬೈಲ್ ಫೋನ್ ಅನ್ನು ರಹಸ್ಯವಾಗಿ ಹ್ಯಾಕ್ ಮಾಡಿದ ಸೈಬರ್ ವಂಚಕರು, ವ್ಯಕ್ತಿಯೊಬ್ಬರ ಗಮನಕ್ಕೆ ಬಾರದಂತೆ ಅವರ ಎರಡು ಬ್ಯಾಂಕ್ ಖಾತೆಗಳಿಂದ ಯುಪಿಐ (UPI) ಮೂಲಕ ಹಂತ ಹಂತವಾಗಿ ₹1,27,700 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ 36 ವರ್ಷದ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡವರು.

ಕಳೆದ ನವೆಂಬರ್ 6ರಂದು ರಾತ್ರಿ 8 ಗಂಟೆಯ ಸುಮಾರಿಗೆ ದೂರುದಾರರ ಮೊಬೈಲ್ ಫೋನ್ನಲ್ಲಿ ಅವರಿಗೆ ತಿಳಿಯದಂತೆಯೇ ಸಾಫ್ಟ್ವೇರ್ ಅಪ್ಡೇಟ್ (Software Update) ಆಗಲು ಆರಂಭಿಸಿತ್ತು. ಇದರಿಂದ ಗಾಬರಿಗೊಂಡ ಅವರು ತಕ್ಷಣವೇ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಫೋನ್ ತನ್ನಿಂದ ತಾನೇ ಸ್ವಿಚ್ ಆನ್ ಆಗಿತ್ತು. ಆಗಲೇ ಅವರಿಗೆ ತಮ್ಮ ಫೋನ್ ಹ್ಯಾಕ್ ಆಗಿರಬಹುದು ಎಂಬ ಅನುಮಾನ ಮೂಡಿತ್ತು.
ಬಳಿಕ ನವೆಂಬರ್ 16ರಂದು ಅವರು ತಮ್ಮ ಮೊಬೈಲ್ನಲ್ಲಿದ್ದ ‘ಗೂಗಲ್ ಪೇ’ (Google Pay) ಆ್ಯಪ್ ತೆರೆದು ವಹಿವಾಟಿನ (Transaction) ವಿವರಗಳನ್ನು ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಫೋನ್ ಹ್ಯಾಕ್ ಆಗಿದ್ದ ನವೆಂಬರ್ 6ರಂದೇ, ಅವರ ಎರಡು ಬ್ಯಾಂಕ್ ಖಾತೆಗಳಿಂದ ಯುಪಿಐ ಮೂಲಕ ಹಂತ ಹಂತವಾಗಿ ಅಪರಿಚಿತ ಖಾತೆಗಳಿಗೆ ಒಟ್ಟು ₹1,27,700 ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.
ತಮ್ಮ ಅರಿವಿಗೆ ಬಾರದಂತೆ ಮೊಬೈಲ್ ಹ್ಯಾಕ್ ಮಾಡಿ ಆನ್ಲೈನ್ ಮೂಲಕ ₹1.27 ಲಕ್ಷ ವಂಚಿಸಿರುವ ಅಪರಿಚಿತ ಸೈಬರ್ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.