ಉಡುಪಿ: ಕಾಪು ಬೀಚ್ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ಮೂವರು ಪ್ರವಾಸಿಗರು – ಓರ್ವನ ರಕ್ಷಣೆ, ಇಬ್ಬರು ನಾಪತ್ತೆ!

ಉಡುಪಿ: ಪ್ರವಾಸಕ್ಕೆಂದು ಬಂದಿದ್ದ ದಾವಣಗೆರೆ ಮೂಲದ ಒಂದೇ ಕುಟುಂಬದ ಮೂವರು ಮಕ್ಕಳು ಕಾಪು ಬೀಚ್ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಓರ್ವ ಬಾಲಕನನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಸಮುದ್ರ ಪಾಲಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಉಡುಪಿಯ ಕಾಪು ಬೀಚ್ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ ದಾವಣಗೆರೆ ಮೂಲದ ಮೂವರಲ್ಲಿ ಓರ್ವ ಬಾಲಕನನ್ನು ರಕ್ಷಿಸಲಾಗಿದ್ದು, 20 ವರ್ಷದ ಸಮೀರ್ ಭಾಷಾ ಹಾಗೂ 15 ವರ್ಷದ ಮಲ್ಲಿಕ್ ರಿಯಾನ್ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ದಾವಣಗೆರೆಯಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ (20) ಹಾಗೂ ಮಲ್ಲಿಕ್ ರಿಯಾನ್ (15) ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ದಿಢೀರ್ ಎದ್ದ ಬೃಹತ್ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಘಟನೆಯನ್ನು ಗಮನಿಸಿದ ತಕ್ಷಣವೇ ಸ್ಥಳೀಯರು ಹಾಗೂ ಬೀಚ್ ಲೈಫ್ ಗಾರ್ಡ್ ಸಿಬ್ಬಂದಿ ಸಮುದ್ರಕ್ಕೆ ಧುಮುಕಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ಮುಳುಗುತ್ತಿದ್ದ ಮೊಹಮ್ಮದ್ ಇಸಾಕ್ನನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನೀರು ಕುಡಿದು ಅಸ್ವಸ್ಥಗೊಂಡಿದ್ದ ಇಸಾಕ್ನನ್ನು ತಕ್ಷಣವೇ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಅಲೆಗಳ ರಭಸಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದು, ಕರಾವಳಿ ಕಾವಲು ಪಡೆ, ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಸಮುದ್ರದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.