150 ವಿದ್ಯಾರ್ಥಿಗಳ ಟಿಕೆಟ್ ಕಾಯ್ದಿರಿಸಲು ಮೈಸೂರಿಗೆ ಹೋಗುವಂತೆ ಸೂಚನೆ: ರೈಲ್ವೆ ವಿರುದ್ಧ ಆಕ್ರೋಶ!

ಮಂಗಳೂರು : ವಾಣಿಜ್ಯೇತರ ಉದ್ದೇಶಗಳಿಗಾಗಿ ಗುಂಪಿನಲ್ಲಿ ಪ್ರಯಾಣಿಸಲು ಇಚ್ಚಿಸುವ ವಿದ್ಯಾರ್ಥಿಗಳು, ಯಾತ್ರಿಕರು ಹಾಗೂ ಸಾರ್ವಜನಿಕರಿಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಲ್ಕ್ ಬುಕಿಂಗ್ ಕಾಯ್ದಿರಿಸಲು ಮೈಸೂರಿಗೆ ಭೇಟಿ ನೀಡಿ ಅನುಮೋದನೆ ಪಡೆಯುವಂತೆ ಸೂಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ (SR) ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗದ ಅಡಿಗೆ ಸೇರಿಸಿ ನಾಲ್ಕು ದಿನಗಳ ನಂತರ, ಅಕ್ಟೋಬರ್ 5ರಿಂದ ಈ ಹೊಸ ಬದಲಾವಣೆ ಜಾರಿಗೆ ಬಂದಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಪ್ರತಿ ತಿಂಗಳು ಸರಾಸರಿ 100 ಬಲ್ಕ್ ಬುಕಿಂಗ್‌ಗಳು ದಾಖಲಾಗುತ್ತಿವೆ.

ನೂರಾರು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿರುವ ಮಂಗಳೂರಿನಲ್ಲಿ, ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಹಾಗೂ ಶೈಕ್ಷಣಿಕ ಪ್ರವಾಸಗಳಿಗೆ ಬೃಹತ್ ಬುಕಿಂಗ್ ಸೌಲಭ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚೆಗೆ ಡಿಸೆಂಬರ್‌ನಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಬೆಂಗಳೂರಿಗೆ 150 ವಿದ್ಯಾರ್ಥಿಗಳಿಗೆ ಟಿಕೆಟ್ ಕಾಯ್ದಿರಿಸಲು ಬಂದಿದ್ದ ನರ್ಸಿಂಗ್ ಕಾಲೇಜಿನ ಪ್ರತಿನಿಧಿಗೆ, ರಿಸರ್ವೇಶನ್ ಕೌಂಟರ್‌ನಲ್ಲಿ ಮೈಸೂರಿಗೆ (ಸುಮಾರು 250 ಕಿ.ಮೀ) ನೇರವಾಗಿ ತೆರಳಿ ಅಧಿಕಾರಿಯಿಂದ ಅನುಮೋದನೆ ಪಡೆಯುವಂತೆ ತಿಳಿಸಲಾಗಿದೆ.
ಮೈಸೂರಿಗೆ ಪ್ರಯಾಣಿಸಲು ಸಾಧ್ಯವಾಗದೆ ಆ ಪ್ರತಿನಿಧಿ ಪಾಲಕ್ಕಾಡ್ ವಿಭಾಗದ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿ ಟಿಕೆಟ್‌ಗಳನ್ನು ಪಡೆದಿದ್ದು, ಇದರಿಂದ ನೈಋತ್ಯ ರೈಲ್ವೆಗೆ ಬ(SWR) ಬರಬೇಕಿದ್ದ ಪ್ರಯಾಣಿಕರ ಆದಾಯ ನಷ್ಟವಾಗಿದೆ. ಈ ಹಿಂದೆ ಡಿಸೆಂಬರ್ 17, 2019ರ ಸುತ್ತೋಲೆಯ ಪ್ರಕಾರ, ನಿಲ್ದಾಣ ಮಟ್ಟದಲ್ಲೇ ಮುಖ್ಯ ಮೀಸಲಾತಿ ಮೇಲ್ವಿಚಾರಕರು (CRS) ಅಥವಾ ನಿಲ್ದಾಣ ವ್ಯವಸ್ಥಾಪಕರಿಗೆ (SMR) ಬಲ್ಕ್ ಬುಕಿಂಗ್ ಅನುಮೋದಿಸುವ ಅಧಿಕಾರವಿತ್ತು. ರೈಲ್ವೆ ಮಂಡಳಿಯ ಮಾರ್ಗಸೂಚಿಗಳಂತೆ 18 ಸೀಟುಗಳಿಂದ ಹಿಡಿದು ಹಿರಿಯ DCM ವರೆಗೆ ವಿವಿಧ ಹಂತದ ಅಧಿಕಾರಿಗಳಿಗೆ ಮಿತಿ ನಿಗದಿಪಡಿಸಲಾಗಿತ್ತು. ಅಲ್ಲದೆ, ನಿಲ್ದಾಣದಿಂದ ಹೊರಗಿನ ವಿನಂತಿಗಳನ್ನು ಫ್ಯಾಕ್ಸ್ ಅಥವಾ ಮೇಲ್ ಮೂಲಕ ಕಳುಹಿಸಿ ತಕ್ಷಣವೇ ಅನುಮತಿ ಪಡೆಯುವ ವ್ಯವಸ್ಥೆಯಿತ್ತು.
ಆಡಳಿತಾತ್ಮಕ ದಕ್ಷತೆಗಾಗಿ ಅಕ್ಟೋಬರ್ 1ರಿಂದ ಮಂಗಳೂರು ಪ್ರದೇಶವನ್ನು SWR ಅಡಿಗೆ ತರಲಾಗಿದ್ದರೂ, ಈಗಿರುವ ಸೌಲಭ್ಯವನ್ನು ಹಿಂಪಡೆದಿರುವುದನ್ನು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಇಮೇಲ್ ಅಥವಾ ವಾಟ್ಸಾಪ್ ಮೂಲಕವೇ ಅರ್ಜಿಗಳನ್ನು ಸಕ್ರಿಯಗೊಳಿಸಿ ತಕ್ಷಣ ಅನುಮತಿ ನೀಡುವ ಕನಿಷ್ಠ ಕೆಲಸವನ್ನು ಮೈಸೂರು ವಿಭಾಗ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.