ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಗಿ ಭದ್ರತೆಯಲ್ಲಿ ಮಲ್ಪೆಗೆ ಬಂದ ಭೂಗತ ಪಾತಕಿ ರವಿ ಪೂಜಾರಿ!

ಉಡುಪಿ : ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಶನಿವಾರ ಮಲ್ಪೆಗೆ ಕರೆತಂದಿದ್ದಾರೆ. ರವಿ ಪೂಜಾರಿಯವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದರು. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಪುತ್ರರಿದ್ದಾರೆ.ಶನಿವಾರ ಮಲ್ಪೆಯ ನೆರ್ಗಿಯಲ್ಲಿರುವ ಹಿರಿಯ ಮನೆಯಲ್ಲಿ ಸುಶೀಲಾ ಪೂಜಾರ್ತಿಯವರ ಅಂತ್ಯಸಂಸ್ಕಾರ ನೆರವೇರಲಿದೆ. ನ್ಯಾಯಾಲಯದ ಷರತ್ತುಬದ್ಧ ಅನುಮತಿಯ ಮೇರೆಗೆ ಬೆಂಗಳೂರಿನ ಪೊಲೀಸರ ಎಸ್ಕಾರ್ಟ್ ಭದ್ರತೆಯಲ್ಲಿ ರವಿ ಪೂಜಾರಿಯನ್ನು ಮಲ್ಪೆಗೆ ಕರೆತರಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲಾ ಪೊಲೀಸರಿಂದಲೂ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
