ಟಿಪ್ಪರ್ ಲಾರಿ-ಸ್ಕೂಟರ್ ಢಿಕ್ಕಿ: ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃ*ತ್ಯು!”

ಕುಂದಾಪುರ : ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಅಕ್ಟೋಬರ್ 30 ರಂದು ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ವಿದ್ಯಾರ್ಥಿಯನ್ನು ಕಂಡ್ಲೂರು ನಿವಾಸಿ ಟಿ.ಕೆ. ಮೊಹಮ್ಮದ್ ಶಾಯನ್ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 30 ರಂದು ನಡೆದ ಭೀಕರ ಅಪಘಾತದ ಬಳಿಕ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದ ಬಳಲುತ್ತಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಾಯನ್ ಅವರನ್ನು ತಕ್ಷಣವೇ ಮಣಿಪಾಲದ ಕೆಎಂಸಿ (KMC) ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಸ್ಕೂಟರ್ನ ಹಿಂಬದಿ ಸವಾರನಾಗಿದ್ದ ಮತ್ತೊಬ್ಬ ವಿದ್ಯಾರ್ಥಿ ಮೊಹಮ್ಮದ್ ರಾಯನ್ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿತ್ತು.
ಘಟನೆಯ ವಿವರಗಳ ಪ್ರಕಾರ, ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರ ಕಡೆಯಿಂದ ಅತ್ಯಂತ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬರುತ್ತಿದ್ದವು. ಈ ವೇಳೆ ಮುಂದೆ ಸಾಗುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನಿಂದಾಗಿ ಮೊದಲ ಟಿಪ್ಪರ್ ಚಾಲಕ ದಿಢೀರನೆ ವೇಗ ಕಡಿಮೆ ಮಾಡಿದ್ದಾನೆ. ಆ ಕ್ಷಣದಲ್ಲಿ ಹಿಂಬದಿಯಿಂದ ಅತಿವೇಗವಾಗಿ ಬಂದ ಮತ್ತೊಂದು ಟಿಪ್ಪರ್ ಮೊದಲ ಲಾರಿಗೆ ಹಿಂಭಾಗದಿಂದ ಭೀಕರವಾಗಿ ಢಿಕ್ಕಿಯಾಗಿದೆ.
ಢಿಕ್ಕಿಯಾದ ರಭಸಕ್ಕೆ ಎರಡನೇ ಟಿಪ್ಪರ್ ಚಾಲಕ ಲಾರಿಯನ್ನು ನಿಯಂತ್ರಿಸಲಾಗದೆ ರಸ್ತೆಯ ಬಲಬದಿಗೆ ತಿರುಗಿಸಿದ್ದಾನೆ. ಈ ವೇಳೆ ಕಂಡ್ಲೂರು ಕಡೆಯಿಂದ ಬಸೂರು ಕಡೆಗೆ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಸ್ಕೂಟರ್ಗೆ ಟಿಪ್ಪರ್ ನೇರವಾಗಿ ಢಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ನಲ್ಲಿದ್ದ ಇಬ್ಬರೂ ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಟಿಪ್ಪರ್ ಲಾರಿ ಚಾಲಕರ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ವಿರುದ್ಧ BNS 2023 ರ ಸೂಕ್ತ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.