‘ನಮ್ಮ ಪ್ರೀತಿ ನಿಮ್ಮ ಕಲ್ಪನೆಗೆ ಹೊಂದಬೇಕಿಲ್ಲ’: ಟೀಕಾಕಾರರಿಗೆ ರಶ್ಮಿಕಾ ಖಡಕ್ ಉತ್ತರ!

‘ಕಾಫಿ ವಿತ್ ಕರಣ್’ ಶೋನಲ್ಲಿ ತಮ್ಮ ವೈವಾಹಿಕ ಜೀವನ ಹಾಗೂ ಮದುವೆಯ ನಿರ್ಧಾರದ ಕುರಿತು ಮಾತನಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಟೀಕೆಗಳಿಗೆ ನಟಿ ರಶ್ಮಿಕಾ ಮಂದಣ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಿ ವಿಜಯ್ ದೇವರಕೊಂಡ ಅವರನ್ನು ಸ್ತ್ರೀದ್ವೇಷಿ ಹಾಗೂ ರೆಡ್ ಫ್ಲ್ಯಾಗ್ ಎಂದು ಕರೆಯುತ್ತಿದ್ದ ನೆಟ್ಟಿಗರಿಗೆ ರಶ್ಮಿಕಾ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಪ್ರಸಾರವಾದ ‘ಕಾಫಿ ವಿತ್ ಕರಣ್ 9’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಾಗಿ ಭಾಗವಹಿಸಿದ್ದರು. ಈ ವೇಳೆ, ತಮ್ಮ ಮದುವೆಯ ಪ್ರಸ್ತಾವನೆಯ ಬಗ್ಗೆ ಮಾತನಾಡುತ್ತಾ, ವಿಜಯ್ ಅವರು ‘ನನ್ನನ್ನು ಮದುವೆಯಾಗಲು ರಶ್ಮಿಕಾ ದಿನವೂ ಕೇಳುತ್ತಿದ್ದಳು’ ಎಂದು ಹೇಳಿದ್ದರು. ಅಲ್ಲದೆ, 100 ಬಾರಿ ಕೇಳಿದ ನಂತರವೇ ಮದುವೆಗೆ ತಾವು ಒಪ್ಪಿಗೆ ನೀಡಿದ್ದಾಗಿ ವಿಜಯ್ ಹೇಳಿದ್ದರು.
ಆದರೆ ಈ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಟೀಕಿಸಲಾಯಿತು. ವಿಜಯ್ ಅವರು ರಶ್ಮಿಕಾ ಅವರನ್ನು ಕೀಳಾಗಿ ಕಂಡಿದ್ದಾರೆ ಮತ್ತು ಅವರದ್ದು ಮಹಿಳಾ ವಿರೋಧಿ ಮನೋಭಾವ ಎಂದು ಹಲವರು ಕಮೆಂಟ್ ಮಾಡಿದ್ದರು. ಈಗ ತಮ್ಮ ಮತ್ತು ವಿಜಯ್ ನಡುವಿನ ವೈಯಕ್ತಿಕ ವಿಚಾರಗಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿರುವವರ ವಿರುದ್ಧ ರಶ್ಮಿಕಾ ಅವರು ಸುದೀರ್ಘ ಪೋಸ್ಟ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ನಾನು ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ, ಆದರೆ ವಿಜಯ್ ಪ್ರತಿಯೊಂದನ್ನೂ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಮದುವೆಯಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾಲಾವಕಾಶ ತಗೆದುಕೊಂಡು ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.
‘ನಮಗೆ ಮೊಣಕಾಲೂರಿ ರಿಂಗ್ ತೊಡಿಸುವ ಗ್ರಾಂಡ್ ಪ್ರಪೋಸಲ್ ಅಗತ್ಯವಿರಲಿಲ್ಲ. ನಮಗೆ ಮುಖ್ಯವಾಗಿದ್ದು ನಮ್ಮ ಭವಿಷ್ಯ ಮತ್ತು ಜೊತೆಯಾಗಿ ಕಟ್ಟಿಕೊಳ್ಳಬೇಕಾದ ಜೀವನ. ನಮ್ಮಿಬ್ಬರ ಸಂದರ್ಶನವನ್ನು ಜನರು ಅರ್ಥಮಾಡಿಕೊಳ್ಳುವ ಬದಲು ಅನಗತ್ಯವಾಗಿ ಟೀಕಿಸಲು ಶುರು ಮಾಡಿದ್ದಾರೆ. ನಮಗೆ ಸಲಹೆ ನೀಡಲು ಗ್ಯಾಂಗ್ ಕಟ್ಟಿಕೊಂಡು ಬಂದಂತೆ ವರ್ತಿಸುತ್ತಿದ್ದಾರೆ. ನಮ್ಮ ಕುಟುಂಬದ ವಿಚಾರಗಳನ್ನು ಎಳೆದು ತರುವುದು ಸಂಪೂರ್ಣವಾಗಿ ಗಡಿ ದಾಟಿದ ನಡವಳಿಕೆ’ ಎಂದು ರಶ್ಮಿಕಾ ಕಿಡಿಕಾರಿದ್ದಾರೆ.‘ನಾವಿಬ್ಬರೂ ಸ್ವಪ್ರಯತ್ನದಿಂದ ಬೆಳೆದು ಬಂದಿರುವ ಸ್ವತಂತ್ರ ವ್ಯಕ್ತಿಗಳು. ನಾವಿಬ್ಬರೂ ಪರಸ್ಪರ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಪ್ರೀತಿ ನಿಮ್ಮ ಕಲ್ಪನೆಗೆ ಹೊಂದಿಕೆಯಾಗದಿದ್ದರೆ ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ’ ಎಂದು ರಶ್ಮಿಕಾ ಮಂದಣ್ಣ ಅವರು ನೆಟ್ಟಿಗರಿಗೆ ಸ್ಪಷ್ಟಪಡಿಸಿದ್ದಾರೆ.
