ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಲ್ಲಿ ಎದ್ದು ಕುಳಿತ 15 ವರ್ಷದ ಬಾಲಕಿ: ಬೆಚ್ಚಿಬಿದ್ದ ಕುಟುಂಬಸ್ಥರು!

ಗ್ವಾಟೆಮಾಲಾ: ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ 15 ವರ್ಷದ ಬಾಲಕಿಯೊಬ್ಬಳು ಶವಪೆಟ್ಟಿಗೆಯಲ್ಲೇ ಎದ್ದು ಕುಳಿತ ಅಚ್ಚರಿಯ ಘಟನೆ ಗ್ವಾಟೆಮಾಲಾದಲ್ಲಿ ವರದಿಯಾಗಿದೆ. ಬಾಲಕಿ ಜೀವಂತವಾಗಿರುವುದನ್ನು ಕಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಶನಿವಾರ ಮುಂಜಾನೆ ಯೂಲೀಡಿ ಇಕ್ಸೊಟೊಯಾಕ್ ಎಂಬ 15 ವರ್ಷದ ಬಾಲಕಿಯನ್ನು ಆಕೆಯ ತಂದೆ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಬಾಲಕಿ ದಿಢೀರ್ ಪ್ರಜ್ಞೆ ಕಳೆದುಕೊಂಡಿದ್ದಾಳೆ.
ಬಾಲಕಿಯ ತಂದೆ ಹಾಗೂ ಸುವಾರ್ತಾಬೋಧಕ ಪಾದ್ರಿಯಾಗಿರುವ ಅಬ್ರಹಾಂ, ಮಗಳು ಉಸಿರಾಡುತ್ತಿದ್ದಾಳೆಯೇ ಎಂದು ಪರೀಕ್ಷಿಸಲು ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಆಕೆಯ ಉಸಿರಾಟ ಹಾಗೂ ನಾಡಿಮಿಡಿತ ಕಂಡುಬರದ ಕಾರಣ ಮಗಳು ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದಾರೆ.
ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸದೆ ಹಾಗೂ ಮರಣ ಪ್ರಮಾಣಪತ್ರವನ್ನೂ ಪಡೆಯದೆ ಕುಟುಂಬಸ್ಥರು ಶವಪೆಟ್ಟಿಗೆಯನ್ನು ಖರೀದಿಸಿ ಆಕೆಯನ್ನು ಮನೆಗೆ ಕರೆತಂದಿದ್ದಾರೆ. ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದಾರೆ.
ಅದೇ ದಿನ ಗ್ವಾಟೆಮಾಲಾದ ಎಲ್ ಜೊಕೋಟ್ನಲ್ಲಿರುವ ಮನೆಯಲ್ಲಿ ಬಾಲಕಿಯ ಅಂತ್ಯಕ್ರಿಯೆಗಾಗಿ ಸಂಬಂಧಿಕರು ಹಾಗೂ ಸ್ಥಳೀಯರು ಜಮಾಯಿಸಿದ್ದರು. ಈ ವೇಳೆ ಬಾಲಕಿಯ ತಾಯಿ ಲೆಸ್ವಿಯಾ ರಿಯೋಸ್, ಮಗಳ ಶವಪೆಟ್ಟಿಗೆಯ ಬಳಿ ಕುಳಿತು ಕಣ್ಣೀರು ಸುರಿಸುತ್ತಿದ್ದಾಗ ಪೆಟ್ಟಿಗೆಯೊಳಗೆ ಚಲನವಲನವಾಗುತ್ತಿರುವುದನ್ನು ಗಮನಿಸಿದ್ದಾರೆ.
ತಕ್ಷಣವೇ ಶವಪೆಟ್ಟಿಗೆಯ ಮುಚ್ಚಳವನ್ನು ತೆರೆದಾಗ ಬಾಲಕಿ ಕಣ್ಣು ತೆರೆದು ನೇರವಾಗಿ ಎದ್ದು ಕುಳಿತಿದ್ದಾಳೆ. ಇದನ್ನು ಕಂಡ ಕುಟುಂಬಸ್ಥರು ಹಾಗೂ ನೆರೆದಿದ್ದವರು ಆಶ್ಚರ್ಯಚಕಿತರಾಗಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕಿಯ ತಾಯಿ ಲೆಸ್ವಿಯಾ ರಿಯೋಸ್, “ನನ್ನ ಮಗಳು ಜೀವಂತವಾಗಿದ್ದಾಳೆ, ಆಕೆ ಮೃತಪಟ್ಟಿಲ್ಲ ಎಂದು ನಾನು ಹೇಳುತ್ತಲೇ ಇದ್ದೆ. ಶವಪೆಟ್ಟಿಗೆಯ ಬಳಿ ಕುಳಿತು ಅಳುತ್ತಿದ್ದಾಗ ಒಳಗೆ ಚಲನವಲನ ಕಂಡುಬಂತು. ನಾವು ಶವಪೆಟ್ಟಿಗೆಯ ಗಾಜಿನ ಕಿಟಕಿಯನ್ನು ತೆರೆದಾಗ ಆಕೆ ಚಲಿಸುತ್ತಿದ್ದಳು. ನಿಧಾನವಾಗಿ ಪ್ರಜ್ಞೆ ಮರಳಿ ಬಂದು ಇದ್ದಕ್ಕಿದ್ದಂತೆ ಎದ್ದು ಕುಳಿತಳು” ಎಂದು ತಿಳಿಸಿದ್ದಾರೆ.
ಬಾಲಕಿ ಜೀವಂತವಾಗಿರುವುದನ್ನು ಕಂಡ ಸಂಬಂಧಿಕರು ಆಕೆಯನ್ನು ಶವಪೆಟ್ಟಿಗೆಯಿಂದ ಹೊರತೆಗೆದು ನೀರು ಕುಡಿಸಲು ಪ್ರಯತ್ನಿಸಿದ್ದಾರೆ. ಈ ಅಚ್ಚರಿಯ ಕ್ಷಣವನ್ನು ಅಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಇನ್ನು ಪ್ರಜ್ಞೆ ಕಳೆದುಕೊಳ್ಳುವ ಮುನ್ನ ನಡೆದ ಘಟನೆಯನ್ನು ವಿವರಿಸಿದ ಬಾಲಕಿ ಯೂಲೀಡಿ ಇಕ್ಸೊಟೊಯಾಕ್, ತಾನು ಬದುಕುಳಿದಿರುವುದು ದೇವರ ಪವಾಡ ಎಂದು ಹೇಳಿದ್ದಾಳೆ.
“ನನ್ನ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತು. ಹೃದಯ ಭಾರವಾದಂತೆ ಅನಿಸಿತು. ನಂತರ ಎಲ್ಲವೂ ಕತ್ತಲಾದಂತೆ ಭಾಸವಾಗಿ ನಾನು ಪ್ರಜ್ಞೆ ಕಳೆದುಕೊಂಡೆ. ನನ್ನ ಜೀವನದಲ್ಲಿ ದೇವರು ಮಾಡಿರುವ ಎಲ್ಲದಕ್ಕೂ ಧನ್ಯವಾದ ಹೇಳಲು ಪದಗಳೇ ಸಾಲದು. ಇದು ನಿಜಕ್ಕೂ ಒಂದು ಪವಾಡ” ಎಂದು ಬಾಲಕಿ ತಿಳಿಸಿದ್ದಾಳೆ.
ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ ಅಬ್ರಹಾಂ, ಮಗಳು ಪ್ರಜ್ಞೆ ಕಳೆದುಕೊಂಡ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
“ಮಗಳು ಪ್ರಜ್ಞೆ ಕಳೆದುಕೊಂಡಾಗ ನಾನು ತಕ್ಷಣ ಕಾರನ್ನು ನಿಲ್ಲಿಸಿ ಆಕೆಯ ಬಳಿಗೆ ಹೋದೆ. ಆಕೆ ಉಸಿರಾಡುತ್ತಿರಲಿಲ್ಲ. ಮಣಿಕಟ್ಟಿನಲ್ಲಿ ನಾಡಿಮಿಡಿತವೂ ಕಂಡುಬರಲಿಲ್ಲ. ಇದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದೆ. ಆ ಕ್ಷಣ ನನಗೆ ಅತ್ಯಂತ ಕಷ್ಟಕರವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ” ಎಂದು ತಿಳಿಸಿದ್ದಾರೆ.
ಸದ್ಯ ಬಾಲಕಿ ಯೂಲೀಡಿ ಇಕ್ಸೊಟೊಯಾಕ್ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರದಿಯಾಗಿದೆ. ಆದರೆ ಈ ಅಚ್ಚರಿಯ ಘಟನೆಯ ಕುರಿತು ಗ್ವಾಟೆಮಾಲಾದ ಆರೋಗ್ಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವೈದ್ಯಕೀಯ ಪರೀಕ್ಷೆ ನಡೆಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರಿಂದ, ಆಕೆ ನಿಜವಾಗಿಯೂ ಮೃತಪಟ್ಟಿದ್ದಳೇ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳೇ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿಲ್ಲ.
