ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಬ್ಲಾಸ್ಟ್: ನಡುಗಿದ ಜೋಕಟ್ಟೆ, ದಟ್ಟ ಹೊಗೆಯಿಂದ ಆತಂಕ!

ಮಂಗಳೂರು: MRPL ಭಾಗದಲ್ಲಿ ಬುಧವಾರ ಮಧ್ಯಾಹ್ನ ಗಂಭೀರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಕಂಪಿಸಿದ ಘಟನೆ ನಡೆದಿದೆ.
ಸ್ಫೋಟದ ಭಾರಿ ಶಬ್ದದಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಫೋಟದ ಪರಿಣಾಮ ಹಲವು ಮನೆಗಳ ಬಾಗಿಲು, ಕಿಟಕಿಗಳು ಹಾಗೂ ಗಾಜುಗಳು ಉದುರಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲವು ಕಟ್ಟಡಗಳ ಗೋಡೆಗಳಿಗೂ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಜಪೆಯಲ್ಲಿ ಸ್ಫೋಟದ ತೀವ್ರತೆಗೆ ಕಂಪನದ ಅನುಭವವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಸ್ಫೋಟ ಸಂಭವಿಸಿದ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ದೂರದಿಂದಲೂ ಹೊಗೆಯ ದೊಡ್ಡ ಪ್ರಮಾಣ ಗೋಚರಿಸುತ್ತಿದೆ. ಘಟನೆಯ ನಿಖರ ಕಾರಣ ಹಾಗೂ ಸ್ಫೋಟದ ತೀವ್ರತೆ ಕುರಿತು ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಯ ಬಳಿಕ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
