ಬಂಟ್ವಾಳ: ಬಿಸಿರೋಡು-ಮೂಡುಬಿದಿರೆ ರಸ್ತೆಗೆ ಬೃಹತ್ ಗೋಳಿ ಮರ ಉರುಳಿಬಿತ್ತು – ಒಂದು ತಾಸು ಸಂಚಾರ ಅಸ್ತವ್ಯಸ್ತ!

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಬಿಸಿರೋಡು–ಮೂಡುಬಿದಿರೆ ರಸ್ತೆಗೆ ಗೋಳಿ ಮರವೊಂದು ಅಡ್ಡವಾಗಿ ಬಿದ್ದ ಪರಿಣಾಮ ಶುಕ್ರವಾರ ಬೆಳಗ್ಗೆ ಸುಮಾರು ಒಂದು ತಾಸು ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪ್ರಮುಖ ರಸ್ತೆಯಾಗಿರುವ ಇಲ್ಲಿ ಬೆಳಗ್ಗೆ ಮರ ಬಿದ್ದಿದ್ದರಿಂದ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವವರು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ರಸ್ತೆ ಮಧ್ಯೆ ಮರ ಬಿದ್ದ ಕಾರಣ ವಾಹನಗಳು ಸಂಚರಿಸಲು ಸಾಧ್ಯವಾಗದೆ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು ಅವರ ನೇತೃತ್ವದಲ್ಲಿ ಸ್ಥಳೀಯರ ತಂಡ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಘಟನೆಯಿಂದ ಯಾವುದೇ ಅಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.