ಚೀನಾ: ಕ್ವಿಂಗ್‌ಡಾವೊ ಬಂದರಿನಲ್ಲಿ ನಿಂತಿದ್ದ ಸರಕು ಹಡಗಿನಲ್ಲಿ ಭೀಕರ ಅಗ್ನಿ ಅವಘಡ – 25 ಮಂದಿ ಸಾ*ವು!

ಬೀಜಿಂಗ್: ಚೀನಾದ ಕ್ವಿಂಗ್‌ಡಾವೊ ಬಂದರಿನಲ್ಲಿ ನಿಂತಿದ್ದ ವಿದೇಶಿ ಧ್ವಜದ ಸರಕು ಸಾಗಣೆ ಹಡಗಿನಲ್ಲಿ ಗುರುವಾರ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 25 ಮಂದಿ ಮೃತಪಟ್ಟಿದ್ದಾರೆ.

ಚೀನಾದ ಪ್ರಮುಖ ಪೂರ್ವ ಕರಾವಳಿ ಬಂದರು ನಗರವಾಗಿರುವ ಕ್ವಿಂಗ್‌ಡಾವೊದಲ್ಲಿ ನಿರ್ವಹಣಾ ಕಾಮಗಾರಿಗಾಗಿ ಹಡಗನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡಾಗ ಹಡಗಿನೊಳಗೆ ಒಟ್ಟು 42 ಜನರು ಇದ್ದರು ಎನ್ನಲಾಗಿದೆ. ಘಟನೆಯ ಬಳಿಕ 17 ಜನರನ್ನು ರಕ್ಷಿಸಲಾಗಿದ್ದು, ಈ ಪೈಕಿ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗುರುವಾರ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ಜ್ವಾಲೆಗಳನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬೆಳಗ್ಗೆ ಸುಮಾರು 11:15ಕ್ಕೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಂದರಿನಲ್ಲಿ ನಿರ್ವಹಣಾ ಕೆಲಸಕ್ಕಾಗಿ ಹಡಗನ್ನು ನಿಲ್ಲಿಸಲಾಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ವರದಿಯಾಗಿದೆ.