ಬೈಂದೂರು: ಮಳೆ ಕೊರತೆಯ ಆತಂಕದ ನಡುವೆಯೂ ಸಾಂಪ್ರದಾಯಿಕ ಕೈರಂಪಣಿ ಮೀನುಗಾರಿಕೆಗೆ ಭರ್ಜರಿ ಮೀನು!

ಬೈಂದೂರು: ಕರಾವಳಿಯಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಸಮುದ್ರ ಜೀವಿಗಳ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು ಎಂಬ ಆತಂಕದ ನಡುವೆಯೇ, ಬೈಂದೂರು ಭಾಗದ ಸಾಂಪ್ರದಾಯಿಕ ಕೈರಂಪಣಿ ಬಲೆಗಳಿಗೆ ಭರ್ಜರಿ ಮೀನು ದೊರೆತಿದೆ.

ಸಾಮಾನ್ಯವಾಗಿ ತೀರ ಪ್ರದೇಶದಲ್ಲಿ ಒಂದು ಅಥವಾ ಎರಡು ದೋಣಿಗಳ ಮೂಲಕ 30ರಿಂದ 40 ಮಂದಿ ಮೀನುಗಾರರ ತಂಡ ಕೈರಂಪಣಿ ಮೀನುಗಾರಿಕೆ ನಡೆಸುತ್ತದೆ. ಈ ಬಾರಿ ಮಳೆಯ ಕೊರತೆಯೇ ಕೈರಂಪಣಿ ಮೀನುಗಾರಿಕೆಗೆ ಅನಿರೀಕ್ಷಿತವಾಗಿ ವರದಾನವಾಗಿ ಪರಿಣಮಿಸಿದೆ. ಉತ್ತಮ ಗುಣಮಟ್ಟದ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬೀಳುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವುದರಿಂದ ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೀನುಗಾರಿಕೆ ಹೆಚ್ಚು ಲಾಭದಾಯಕವಾಗಿದೆ ಎಂದು ಮೀನುಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.ಕಳೆದ ಒಂದು ವಾರದಿಂದ ಶಿರೂರು, ದೊಂಬೆ, ಕಳಿಹಿತ್ಲು ಹಾಗೂ ಸೋಮೇಶ್ವರ ಕರಾವಳಿ ಪ್ರದೇಶಗಳಲ್ಲಿ ಭರ್ಜರಿ ಮೀನುಗಾರಿಕೆಯಾಗಿರುವುದಾಗಿ ವರದಿಯಾಗಿದೆ. ಮಂಗಳವಾರ ಶಿರೂರು ಕರಾವಳಿಯಲ್ಲಿ ‘ಮಹಾಗಣಪತಿ’ ಕೈರಂಪಣಿ ದೋಣಿಗೆ ಒಂದೇ ದಿನದಲ್ಲಿ 3 ಲಕ್ಷ ರೂ.ಗೂ ಅಧಿಕ ವಹಿವಾಟು ದಾಖಲಾಗಿದೆ. ಬಲೆಗಳಲ್ಲಿ ತಾಜಾ ಮೀನುಗಳು ಅಪಾರ ಪ್ರಮಾಣದಲ್ಲಿ ಸಿಕ್ಕಿದ್ದು, ವಿಶೇಷವಾಗಿ ಕೋಡವಾಯಿ ಮೀನು ಹಾಗೂ ಸಿಗಡಿ ಹೆಚ್ಚಿನ ಪ್ರಮಾಣದಲ್ಲಿದ್ದವು.ತಾಜಾ ಮೀನುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಕರಾವಳಿ ನಿವಾಸಿಗಳು ಮೀನು ಖರೀದಿಗಾಗಿ ತೀರ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆಳ ಸಮುದ್ರಕ್ಕೆ ತೆರಳುವ ಮೀನುಗಾರಿಕಾ ದೋಣಿಗಳು ಸಾಮಾನ್ಯವಾಗಿ ಎರಡು-ಮೂರು ದಿನಗಳ ಬಳಿಕ ದಡಕ್ಕೆ ಮರಳಿದರೆ, ಕೈರಂಪಣಿ ದೋಣಿಗಳಲ್ಲಿ ಹಿಡಿದ ಮೀನುಗಳು ತಕ್ಷಣವೇ ದಡಕ್ಕೆ ತಂದು ಮಾರಾಟ ಮಾಡಲಾಗುತ್ತದೆ.ಹೀಗಾಗಿ ಬಲೆಗಳನ್ನು ದಡಕ್ಕೆ ಎಳೆದು ತರುತ್ತಿದ್ದಂತೆಯೇ ತಾಜಾ ಮೀನು ಖರೀದಿಸಲು ಗ್ರಾಹಕರು ಕಡಲತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಸಿಕ್ಕ ಮೀನುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇದರಿಂದ ಬೈಂದೂರು ಕರಾವಳಿಯಲ್ಲಿ ಕೈರಂಪಣಿ ಮೀನುಗಾರಿಕೆ ಮತ್ತೆ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.