ಮುಂಬೈ: ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಬಾಲಿವುಡ್ ರ‍್ಯಾಪರ್ ಬಾದ್‌ಶಾ ಹಾಗೂ ನಟಿ ಇಶಾ ರಿಖಿ!

ಮುಂಬೈ: ಖ್ಯಾತ ಬಾಲಿವುಡ್ ರ‍್ಯಾಪರ್ ಬಾದ್‌ಶಾ ಹಾಗೂ ಪಂಜಾಬಿ ನಟಿ ಇಶಾ ರಿಖಿ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದು, ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಬೇರ್ಪಡೆಯ ಊಹಾಪೋಹಗಳಿಗೆ ಸೋಮವಾರ ರಾತ್ರಿ ಜಂಟಿ ಹೇಳಿಕೆ ನೀಡುವ ಮೂಲಕ ಅಧಿಕೃತ ತೆರೆ ಎಳೆದಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಅತ್ಯಂತ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದ ಈ ಜೋಡಿ, ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಜಂಟಿ ಹೇಳಿಕೆಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಾನು ಮತ್ತು ಇಶಾ ರಿಖಿ ಪರಸ್ಪರ ಸಮ್ಮತಿಯಿಂದ ಬೇರ್ಪಡಲು ಹಾಗೂ ನಮ್ಮದೇ ಪ್ರತ್ಯೇಕ ಹಾದಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೇವೆ. ಈ ನಿರ್ಧಾರವನ್ನು ಪರಸ್ಪರ ಗೌರವದಿಂದ ತೆಗೆದುಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುವಂತೆ ನಾವು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇವೆ,” ಎಂದು ಬಾದ್‌ಶಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವೇ ನಮ್ಮ ಕೊನೆಯ ಹಾಗೂ ಏಕೈಕ ಹೇಳಿಕೆಯಾಗಿದೆ. ನಮ್ಮ ಸಂಬಂಧದ ಕುರಿತು ಯಾರೂ ಅನಗತ್ಯ ಊಹಾಪೋಹಗಳನ್ನು ಮಾಡಬೇಡಿ ಎಂದು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಾದ್‌ಶಾ ಮತ್ತು ಇಶಾ ರಿಖಿ ದಂಪತಿ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಗಳು ಕಳೆದ ಜುಲೈ ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸಿದ್ದವು. ಜುಲೈನಲ್ಲಿ ಇಶಾ ರಿಖಿ ಅವರು ಬಾದ್‌ಶಾ ಅವರೊಂದಿಗಿನ ವೀಡಿಯೊ ಹಾಗೂ ಫೋಟೋಗಳ ಸಂಗ್ರಹವನ್ನು ಹಂಚಿಕೊಂಡು, “ಪ್ರತಿಯೊಂದು ಬಿರುಗಾಳಿಯೂ ಒಂದು ಪಾಠ. ಪ್ರತಿಯೊಂದು ಪ್ರಾರ್ಥನೆಯೂ ಭರವಸೆ,” ಎಂದು ಶೀರ್ಷಿಕೆ ನೀಡಿದ್ದರು. ಇದಾದ ಬಳಿಕ ಇಶಾ ಅವರ ತಾಯಿ ಪೂನಂ ರಿಖಿ ಕೂಡ ‘ಕರ್ಮ’ದ ಕುರಿತು ಸರಣಿ ಪೋಸ್ಟ್‌ಗಳನ್ನು ಹಾಕಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಕಳೆದ ಜೂನ್‌ನಲ್ಲಿ ಇನ್‌ಸ್ಟಾಗ್ರಾಮ್ ‘Ask Me Anything’ ಸೆಷನ್‌ನಲ್ಲಿ ಇಶಾ ರಿಖಿ ಅವರು ಬಾದ್‌ಶಾ ಅವರೊಂದಿಗಿನ ಮದುವೆಯನ್ನು ದೃಢಪಡಿಸಿದ್ದರು. ರ‍್ಯಾಪರ್ ಬಾದ್‌ಶಾ ಅವರಿಗೆ ಇದು ಎರಡನೇ ವಿಚ್ಛೇದನವಾಗಿದೆ. ಅವರು ಈ ಹಿಂದೆ ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. 2020 ರಲ್ಲಿ ಜಾಸ್ಮಿನ್ ಅವರಿಂದ ಬೇರ್ಪಟ್ಟು ವಿಚ್ಛೇದನ ಪಡೆದುಕೊಂಡಿದ್ದರು. ಈ ದಂಪತಿಗೆ ಜೇಸಮಿ ಗ್ರೇಸ್ ಮಸಿಹ್ ಸಿಂಗ್ ಎಂಬ 7 ವರ್ಷದ ಮಗಳಿದ್ದಾಳೆ.