ಗೋವಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಇಂಜಿನ್ ವೈಫಲ್ಯ: ಮೋಪಾ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ!

ಪಣಜಿ: ಗೋವಾದಿಂದ ದಿಲ್ಲಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದರಲ್ಲಿ ಹಾರಾಟದ ವೇಳೆ ಇಂಜಿನ್ ವೈಫಲ್ಯ ವರದಿಯಾದ ಹಿನ್ನೆಲೆಯಲ್ಲಿ, ವಿಮಾನವನ್ನು ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ತಿರುಗಿಸಿ ವಾಪಸ್ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಈ ವೇಳೆ ವಾಯು ಸಂಚಾರ ನಿಯಂತ್ರಣ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು ಎಂದು ಮೂಲಗಳು ತಿಳಿಸಿವೆ.
ಇಂಡಿಗೋ ವಿಮಾನ 6E 2102 ಮಂಗಳವಾರ ಬೆಳಿಗ್ಗೆ 9.16ಕ್ಕೆ ಗೋವಾದಿಂದ ದಿಲ್ಲಿಗೆ ಹೊರಟಿತ್ತು. ಹಾರಾಟದ ಬಳಿಕ ಇಂಜಿನ್ ವೈಫಲ್ಯ ಕಂಡು ಬಂತು. ಹೀಗಾಗಿ ದಿಲ್ಲಿಗೆ ತೆರಳದೆ, ಸುರಕ್ಷಿತವಾಗಿ ಇಳಿಸಲು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಗೋವಾಕ್ಕೆ ವಾಪಸ್ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಫೈಟ್‌ರಾಡಾರ್ 24ನ ದತ್ತಾಂಶದ ಪ್ರಕಾರ, ವಿಮಾನವು ದಕ್ಷಿಣ ಮಹಾರಾಷ್ಟ್ರದ ಕರಾವಳಿ ಪ್ರದೇಶದ ಮೇಲಿನಿಂದ ಹಾರುತ್ತಿದ್ದಾಗ ಗೋವಾ ಕಡೆಗೆ ವಾಪಸ್ ತಿರುಗಿತು. ವಾಪಸ್ ತಿರುಗಲು ಆರಂಭಿಸಿದಾಗ ವಿಮಾನವು ಸುಮಾರು 14,000 ಅಡಿ ಎತ್ತರದಲ್ಲಿ ಹಾರುತ್ತಿತ್ತು.
ವಿಮಾನವು ಗೋವಾ ಕಡೆಗೆ ವಾಪಸ್ ಬರುತ್ತಿದ್ದಾಗ ಬೆಳಿಗ್ಗೆ 9.30ರ ಸುಮಾರಿಗೆ ATC ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು. ಬಳಿಕ ವಿಮಾನವು ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ.