ಚೆಸ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಆರ್. ಪ್ರಜ್ಞಾನಂದ: ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ!

ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅಮೆರಿಕದ ಸೈಂಟ್ ಲೂಯಿಸ್ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಗೆದ್ದು ಚೆಸ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಗೆಲುವಿನೊಂದಿಗೆ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ತಮ್ಮ ವೃತ್ತಿಜೀವನದ ಅತಿ ದೊಡ್ಡ ಪ್ರಶಸ್ತಿಯನ್ನು ಗೆದ್ದಿರುವ ಅವರಿಗೆ 2 ಲಕ್ಷ ಅಮೆರಿಕನ್ ಡಾಲರ್ (ಸುಮಾರು ರೂ. 1.67 ಕೋಟಿ) ನಗದು ಬಹುಮಾನ ದೊರೆತಿದೆ.ಫೈನಲ್ನಲ್ಲಿ ಅಮೆರಿಕದ ಸ್ಟಾರ್ ಆಟಗಾರ ಫ್ಯಾಬಿಯಾನೊ ಕರುವಾನಾ ವಿರುದ್ಧ ಪ್ರಜ್ಞಾನಂದ ಅದ್ಭುತ ಕಮ್ಬ್ಯಾಕ್ ಮೂಲಕ ಗೆಲುವು ಸಾಧಿಸಿದರು. ಕ್ಲಾಸಿಕಲ್ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಾಗ ಕರುವಾನಾ 6 ಪಾಯಿಂಟ್ಗಳ ಮುನ್ನಡೆ ಹೊಂದಿದ್ದರು. ಆರಂಭಿಕ ಹಂತದಲ್ಲಿ ಪ್ರಜ್ಞಾನಂದಗೆ ಭಾರೀ ಹಿನ್ನಡೆಯಾಗಿದ್ದರೂ, ರ್ಯಾಪಿಡ್ ವಿಭಾಗದಲ್ಲಿ ಭಾರತದ ಆಟಗಾರ ತೋರಿದ ಅದ್ಭುತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಫೈನಲ್ ದಿನದ ರ್ಯಾಪಿಡ್ ವಿಭಾಗದಲ್ಲಿ ಪ್ರಜ್ಞಾನಂದ ಸತತ ಎರಡು ಪಂದ್ಯಗಳನ್ನು ಗೆದ್ದು ಕರುವಾನಾ ಅವರ ಮುನ್ನಡೆಯನ್ನು ಬಹುತೇಕ ಅಳಿಸಿಹಾಕಿದರು.ಇದಾದ ಬಳಿಕ ಪ್ರಶಸ್ತಿ ಗೆಲ್ಲಲು ನಾಲ್ಕು ಬ್ಲಿಟ್ಜ್ ಪಂದ್ಯಗಳು ನಿರ್ಣಾಯಕವಾದವು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದಗೆ ಗೆಲುವಿನ ಅವಕಾಶವಿದ್ದರೂ ಸಮಯದ ಒತ್ತಡದಿಂದಾಗಿ ಪಂದ್ಯ ಕಠಿಣ ಹಂತಕ್ಕೆ ತಲುಪಿತು. ಆದರೆ ಕರುವಾನಾ ನಿರ್ಣಾಯಕ ಗೆಲುವಿನ ನಡೆ ಕಂಡುಕೊಳ್ಳಲು ವಿಫಲರಾದ ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಅಂತಿಮವಾಗಿ ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ, ಒಟ್ಟಾರೆ 15-13 ಅಂಕಗಳ ಅಂತರದಲ್ಲಿ ಕರುವಾನಾ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಫೈನಲ್ ಆರಂಭದಲ್ಲಿ ಕರುವಾನಾ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು. ಮೊದಲ ಕ್ಲಾಸಿಕಲ್ ಗೇಮ್ನಲ್ಲಿ ಪ್ರಜ್ಞಾನಂದ 6-0 ಅಂತರದಲ್ಲಿ ಸೋಲನುಭವಿಸಿ ಭಾರೀ ಹಿನ್ನಡೆ ಕಂಡಿದ್ದರು. ಎರಡನೇ ಕ್ಲಾಸಿಕಲ್ ಗೇಮ್ನಲ್ಲಿ ಇಬ್ಬರೂ 3-3 ಡ್ರಾ ಸಾಧಿಸಿದರು. ಹೀಗಾಗಿ ಕರುವಾನಾ ಅಂತಿಮ ದಿನದಾಟಕ್ಕೆ 6 ಪಾಯಿಂಟ್ಗಳ ಮುನ್ನಡೆಯೊಂದಿಗೆ ಕಾಲಿಟ್ಟಿದ್ದರು. ಆದರೆ ರ್ಯಾಪಿಡ್ ಸುತ್ತಿನಲ್ಲಿ ಪ್ರಜ್ಞಾನಂದ ತೋರಿದ ಸಂಘಟಿತ ಹಾಗೂ ಆಕ್ರಮಣಕಾರಿ ಆಟ ಪಂದ್ಯದ ಲೆಕ್ಕಾಚಾರವನ್ನೇ ಬದಲಿಸಿತು.ಈ ಗೆಲುವಿನೊಂದಿಗೆ ಪ್ರಜ್ಞಾನಂದ ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಚೆಸ್ನ ಹೊಸ ಪೀಳಿಗೆಯ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿರುವ ಪ್ರಜ್ಞಾನಂದ ಅವರ ಈ ಸಾಧನೆ, ಅಂತಾರಾಷ್ಟ್ರೀಯ ಚೆಸ್ ವೇದಿಕೆಯಲ್ಲಿ ಭಾರತದ ಪ್ರಾಬಲ್ಯ ಮತ್ತಷ್ಟು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.