ಕೆಎಸ್ಆರ್ಟಿಸಿ ಬಸ್ಗಳ ಹೈಟೆಕ್ ಮೇಲ್ವಿಚಾರಣೆ: ಇನ್ಮುಂದೆ ಲೈವ್ ಲೊಕೇಷನ್ ಜತೆಗೆ ಪ್ಯಾನಿಕ್ ಬಟನ್ ವ್ಯವಸ್ಥೆ!

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗಾಗಿ ಕಾಯುವಾಗ ‘ಬಸ್ ಎಲ್ಲಿದೆ? ಇನ್ನೆಷ್ಟು ಹೊತ್ತಿಗೆ ಬರುತ್ತೆ? ಮಾರ್ಗಮಧ್ಯೆ ಬಸ್ ಕೆಟ್ಟು ನಿಂತಿದೆಯಾ?’ ಎಂಬ ಗೊಂದಲ ಪ್ರಯಾಣಿಕರಿಗೆ ಸಾಮಾನ್ಯ. ಆದರೆ, ಇನ್ಮುಂದೆ ಈ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಗಳನ್ನು ಹೈಟೆಕ್ ಮಾಡುವತ್ತ ಹೆಜ್ಜೆ ಇಟ್ಟಿದೆ.

ಇನ್ಮುಂದೆ ಬಸ್ಗಳ ಲೈವ್ ಲೊಕೇಷನ್ ಟ್ರ್ಯಾಕಿಂಗ್ ಜತೆಗೆ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಪ್ಯಾನಿಕ್ ಬಟನ್ ವ್ಯವಸ್ಥೆಯೂ ಇರಲಿದೆ. ದೆಹಲಿಯ ನಿರ್ಭಯ ಪ್ರಕರಣದ ಬಳಿಕ ವಾಣಿಜ್ಯ ವಾಹನಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್’ (VLTD) ಹಾಗೂ ‘ಪ್ಯಾನಿಕ್ ಬಟನ್’ ಅಳವಡಿಕೆಗೆ ಒತ್ತು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾರಿಗೆ ಇಲಾಖೆಯೂ KSRTC ಬಸ್ಗಳಲ್ಲಿ ಈ ತಂತ್ರಜ್ಞಾನ ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.ಕೆಎಸ್ಆರ್ಟಿಸಿಯ ಒಟ್ಟು 6,063 ಬಸ್ಗಳ ಪೈಕಿ 2,344 ಬಸ್ಗಳಿಗೆ ಈಗಾಗಲೇ GPS ಆಧಾರಿತ VLTD ಸಾಧನ ಅಳವಡಿಸಲಾಗಿದೆ. ಉಳಿದ 3,743 ಬಸ್ಗಳಿಗೂ VLTD ತಂತ್ರಜ್ಞಾನ ಅಳವಡಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಉಳಿದ ಬಸ್ಗಳಿಗೂ ಈ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆಯಿದೆ. VLTD ವ್ಯವಸ್ಥೆ ಜಾರಿಯಾದ ಬಳಿಕ ಬಸ್ನ ಪ್ರಸ್ತುತ ಸ್ಥಳವನ್ನು ಲೈವ್ ಆಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಇದರಿಂದ ಬಸ್ಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಬಸ್ ಎಲ್ಲಿದೆ, ಇನ್ನೆಷ್ಟು ದೂರದಲ್ಲಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಮಾರ್ಗಮಧ್ಯೆ ಬಸ್ ಕೆಟ್ಟು ನಿಂತರೆ ಅಥವಾ ಸಂಚಾರದಲ್ಲಿ ವಿಳಂಬವಾದರೆ ಅದರ ಮೇಲೂ ನಿಗಾ ಇಡಲು ಸಾಧ್ಯವಾಗಲಿದೆ.ಕೆಎಸ್ಆರ್ಟಿಸಿ ಬಸ್ಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಲು ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ಮಿಸುವ ಕಾರ್ಯವೂ ನಡೆಯುತ್ತಿದೆ. ಈ ಕೇಂದ್ರದ ಮೂಲಕ ಬಸ್ಗಳ ಸ್ಥಳ, ಸಂಚಾರ ಹಾಗೂ ತುರ್ತು ಪರಿಸ್ಥಿತಿಗಳ ಕುರಿತು ನಿಗಾ ವಹಿಸಲು ಸಾಧ್ಯವಾಗಲಿದೆ. ಪ್ರಯಾಣದ ವೇಳೆ ಮಹಿಳೆಯರು ಅಥವಾ ಇತರ ಪ್ರಯಾಣಿಕರಿಗೆ ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಒತ್ತುವ ಮೂಲಕ ನೆರವು ಕೋರಬಹುದು. ಬಟನ್ ಒತ್ತಿದ ತಕ್ಷಣ ಸಂಬಂಧಿಸಿದ ಮಾಹಿತಿ ಕಮಾಂಡ್ ಸೆಂಟರ್ಗೆ ತಲುಪಲಿದ್ದು, ಅಗತ್ಯವಿದ್ದಲ್ಲಿ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನೆರವಿಗೆ ಧಾವಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.ಬಸ್ಗಳ ಲೈವ್ ಟ್ರ್ಯಾಕಿಂಗ್ ಹಾಗೂ ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ನೀಡುವ ನಿರೀಕ್ಷೆಯಿದೆ. ವಿಶೇಷವಾಗಿ ರಾತ್ರಿ ಪ್ರಯಾಣಿಸುವ ಮಹಿಳೆಯರು ಹಾಗೂ ದೂರದ ಪ್ರಯಾಣಿಕರಿಗೆ ಈ ತಂತ್ರಜ್ಞಾನ ಹೆಚ್ಚಿನ ನೆರವಾಗಲಿದೆ. ಒಟ್ಟಿನಲ್ಲಿ, ಲೈವ್ ಟ್ರ್ಯಾಕಿಂಗ್, ಕಮಾಂಡ್ ಸೆಂಟರ್ ಮತ್ತು ಪ್ಯಾನಿಕ್ ಬಟನ್ ಮೂಲಕ KSRTC ಬಸ್ ಸೇವೆ ಮತ್ತಷ್ಟು ಸುರಕ್ಷಿತ ಹಾಗೂ ತಂತ್ರಜ್ಞಾನ ಸ್ನೇಹಿಯಾಗುವತ್ತ ಹೆಜ್ಜೆ ಇಡುತ್ತಿದೆ.