ಉಡುಪಿ: ಶ್ರೀಕೃಷ್ಣ ಮಠದಲ್ಲಿ ಆಗಸ್ಟ್ 29ರಿಂದ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ; ಸೆ.5ರಂದು ವಿಟ್ಲಪಿಂಡಿ ಮಹೋತ್ಸವ!

ಉಡುಪಿ : ವಿಶ್ವಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಈ ಬಾರಿಯ ‘ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ’ವು ಆಗಸ್ಟ್ 29ರಿಂದ ಸೆಪ್ಟೆಂಬರ್ 6ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 5ರಂದು ರಥಬೀದಿಯಲ್ಲಿ ವೈಭವದ ‘ವಿಟ್ಲಪಿಂಡಿ’ (ಶ್ರೀಕೃಷ್ಣ ಲೀಲೋತ್ಸವ) ಆಚರಿಸಲಾಗುವುದು ಎಂದು ಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರು ತಿಳಿಸಿದ್ದಾರೆ.

ಉಡುಪಿ ರಥಬೀದಿಯ ಶಿರೂರು ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸೆಪ್ಟೆಂಬರ್ 4ರಂದು ಮಧ್ಯರಾತ್ರಿ 12:12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಸೆ.5ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಅಪರಾಹ್ನ 3:30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ಮತ್ತು ಬಾಲಲೀಲೆಗಳನ್ನು ನೆನಪಿಸುವ ವಿಟ್ಲಪಿಂಡಿ ಮಹೋತ್ಸವ ನೆರವೇರಲಿದೆ ಎಂದರು.
ಮಠದ ದಿವಾನರಾದ ಡಾ.ಉದಯ್ ಸರಳತ್ತಾಯ ಮಾತನಾಡಿ, ಈ ಬಾರಿಯ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆಯಾಗಿ ಸೆಪ್ಟೆಂಬರ್ 5ರಂದು ಅಪರಾಹ್ನ ರಥಬೀದಿಯ ವಿಶೇಷ ವೇದಿಕೆಯಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ‘ಮಲ್ಲಯುದ್ಧ’ ಪ್ರದರ್ಶನ ನಡೆಯಲಿದೆ. ಮೈಸೂರು, ಮಂಡ್ಯ ಹಾಗೂ ಮಂಗಳೂರಿನ ಆಹ್ವಾನಿತ ಪೈಲ್ವಾನರು ಇದರಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ರಾಜಾಂಗಣದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ವೈಭವದ ಹುಲಿವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು, ವಿಜೇತ ತಂಡಕ್ಕೆ ₹1 ಲಕ್ಷ ಬಹುಮಾನ ನೀಡಲಾಗುವುದು. ಸೆಪ್ಟೆಂಬರ್ 6 ರಂದು ಕೋಟಿ ತುಳಸಿ ಅರ್ಚನೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
ಪರ್ಯಾಯ ಅವಧಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಜನವರಿಯಿಂದ ಇದುವರೆಗೆ ₹4 ಕೋಟಿಗೂ ಅಧಿಕ ವೆಚ್ಚದಲ್ಲಿ ಹಲವು ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ₹50.40 ಲಕ್ಷ ವೆಚ್ಚದಲ್ಲಿ ನೂತನ ಕ್ಯೂ ವ್ಯವಸ್ಥೆ, ₹75.42 ಲಕ್ಷ ವೆಚ್ಚದಲ್ಲಿ ಶೌಚಾಲಯ, ₹65 ಲಕ್ಷ ವೆಚ್ಚದಲ್ಲಿ ಬಯೋಗ್ಯಾಸ್ ಘಟಕ, ₹15 ಲಕ್ಷ ವೆಚ್ಚದಲ್ಲಿ ಬ್ರಹ್ಮರಥಕ್ಕೆ ಹೊಸ ಚಕ್ರಗಳು, ₹20.30 ಲಕ್ಷ ವೆಚ್ಚದ ಸಿಸಿಟಿವಿ ಕ್ಯಾಮೆರಾ ಹಾಗೂ ಆಧುನಿಕ ಬಾಯ್ಲರ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಡಾ. ಸರಳತ್ತಾಯ ವಿವರಿಸಿದರು.