ಕಾಸರಗೋಡು: ಡಿಸೆಂಬರ್ನಲ್ಲಿ ಮದುವೆಯಾಗಬೇಕಿದ್ದ ಎಸ್ಬಿಐ ಬ್ಯಾಂಕ್ ಉದ್ಯೋಗಿ ಯುವ ಜೋಡಿ ಪ್ರತ್ಯೇಕವಾಗಿ ಆತ್ಮಹ*ತ್ಯೆಗೆ ಶರಣು!

ಕಾಸರಗೋಡು: ಡಿಸೆಂಬರ್ 26 ರಂದು ವಿವಾಹವಾಗಬೇಕಿದ್ದ ಬ್ಯಾಂಕ್ ಉದ್ಯೋಗಿಗಳಾಗಿರುವ ಯುವ ಜೋಡಿ ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ವರದಿಯಾಗಿದೆ.

ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ (25) ಮೈಸೂರು ಜಿಲ್ಲೆಯ ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಹುಣಸೂರಿನ ಎಸ್ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ಅಂದರೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಅನುಶ್ರೀ ಅವರ ನಿಶ್ಚಿತಾರ್ಥವಾಗಿರುವ ಯುವಕ ಕಣ್ಣೂರು ಮೂಲದ ವಿ. ಅಮಲ್ (26) ಕೊಚ್ಚಿಯ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಅಮಲ್ ಅವರು ಎರ್ನಾಕುಲಂನ ಎಂ.ಜಿ. ರೋಡ್ ಎಸ್ಬಿಐ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.
ಮೃತ ಅನುಶ್ರೀ ಅವರು ಪಳ್ಳಿಕ್ಕರದ ಕೆ. ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿಯಾಗಿದ್ದು, ಅಮಲ್ ಅವರು ಕಣ್ಣೂರಿನ ಅಂಬಲತಟ್ಟುವಿನ ಸುಧಾಕರನ್ ಮತ್ತು ಅನಿತಾ ದಂಪತಿಯ ಪುತ್ರನಾಗಿದ್ದಾರೆ. ಇತ್ತೀಚೆಗಷ್ಟೇ ಇಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಕಳೆದ ಶನಿವಾರವಷ್ಟೇ ಇಬ್ಬರೂ ಕಾಸರಗೋಡಿನ ಮನೆಗೆ ಬಂದು ಭಾನುವಾರ ಸಂಜೆ ವಾಪಸ್ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ನೇಹಿತ ಶಾಯೋನ್ ನೀಡಿದ ಮಾಹಿತಿಯ ಮೇರೆಗೆ ಎರ್ನಾಕುಲಂ ಟೌನ್ ನಾರ್ತ್ ಪೊಲೀಸರು ಹೋಟೆಲ್ಗೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಹುಣಸೂರು ಪೊಲೀಸರು ಅನುಶ್ರೀ ಅವರ ಸಾವಿನ ಹಿಂದಿರುವ ಕಾರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಈ ದುರಂತ ಸಂಭವಿಸಿರುವುದು ಎರಡೂ ಕುಟುಂಬಗಳಲ್ಲಿ ಆಘಾತ ಮೂಡಿಸಿದೆ.