ಮುಲ್ಕಿ: ಬೈಕ್‌ಗೆ ಕಾರು ಡಿಕ್ಕಿ ಪ್ರಕರಣ; ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಗಾಯಾಳು ಯುವಕ ಸಾ*ವು!

ಮಂಗಳೂರು: ಬೈಕ್ ಮತ್ತು ವೇಗವಾಗಿ ಬಂದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮೃತರನ್ನು ಕಾರ್ನಾಡ್ ನಿವಾಸಿ ಅಕ್ಷಿತ್(32) ಎಂದು ಗುರುತಿಸಲಾಗಿದೆ.ಜೂನ್ 28ರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಅಕ್ಷಿತ್ ಹಾಗೂ ಮತ್ತೋರ್ವ ಯುವಕ ದ್ವಿಚಕ್ರ ವಾಹನದಲ್ಲಿ ಕಾರ್ನಾಡ್‌ನಿಂದ ಮುಲ್ಕಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಕಾರೊಂದು ಎದುರಿನಿಂದ ವೇಗವಾಗಿ ಬಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆದರೆ, ಸುದೀರ್ಘ ಅವಧಿಯ ಚಿಕಿತ್ಸೆಯ ಬಳಿಕವೂ ಅಕ್ಷಿತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಶುಕ್ರವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಮನೀಶ್ ಅವರು ಇದೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.