ಗ್ಲಾಸ್ಕೋ ರೆಸ್ಟೋರೆಂಟ್ನಲ್ಲಿ ಭಾರತದ ನಕ್ಷೆ ವಿರೂಪಗೊಳಿಸಿದ್ದಕ್ಕೆ ಆಕ್ಷೇಪ: ಬಾಕ್ಸರ್ ಲೊವಿನಾ ಬೊರ್ಗೊಹೈನ್ ಸಾಹಸ ಶ್ಲಾಘಿಸಿದ ಪ್ರಧಾನಿ ಮೋದಿ!

ಹೊಸದಿಲ್ಲಿ: ಸ್ಕಾಟ್ಲಂಡ್ ನ ಗ್ಲಾಸ್ಕೋದ ರೆಸ್ಟೋರೆಂಟ್ನಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಕ್ಸರ್ ಲೊವಿನಾ ಬೊರ್ಗೊಹೈನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು.
ಸ್ಕಾಟ್ಲಂಡ್ ನಿಂದ ಹಿಂದಿರುಗಿದ ಬಳಿಕ ಕಾಮನ್ವೆಲ್ತ್ ಚಾಂಪಿಯನ್ ಗಳೊಂದಿಗೆ ನಡೆದ ಸಭೆಯಲ್ಲಿ ಮೋದಿ ಈ ವಿಷಯ ಪ್ರಸ್ತಾಪಿಸಿದರು. 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 75 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಲೊವಿನಾ ಅವರನ್ನು ಉದ್ದೇಶಿಸಿ, ‘ಕ್ಯಾ ಹುವಾ ವೋ ರೆಸ್ಟೋರೆಂಟ್ ವಾಲೆ ಸೆ ಜಗ್ಗಾಕರ್ ರಹಿ ಥಿ?’ (ಏನಾಯಿತು, ನೀವು ರೆಸ್ಟೋರೆಂಟ್ನವರೊಂದಿಗೆ ಜಗಳವಾಡುತ್ತಿದ್ದಿರಾ?) ಎಂದು ಮೋದಿ ಕೇಳಿದರು.

ಅಸ್ಸಾಂ ಮೂಲದ ಬಾಕ್ಸರ್ ನಗುತ್ತಲೇ, ‘ಇದು ಸಂತೋಷದ ಸಂದರ್ಭ ಸರ್. ನಾವು ಆಚರಿಸುತ್ತಿದ್ದೆವು. ಆದರೆ ವಿರೂಪಗೊಂಡ ಧ್ವಜವನ್ನು ನೋಡಲು ನನಗೆ ಇಷ್ಟವಾಗಲಿಲ್ಲ. ನಾನು ಅವರಿಗೆ ನಯವಾಗಿ ಹೇಳಿದೆ. ಅವರು ಬದಲಾವಣೆಯನ್ನೂ ಮಾಡಿದ್ದಾರೆ.
ಎಂದು ಉತ್ತರಿಸಿದರು.
ಲೊವಿನಾ ಅವರನ್ನು ಶ್ಲಾಘಿಸಿದ ಮೋದಿ, ವಿಜಯೋತ್ಸವ ಆಚರಿಸಲು ತೆರಳಿದ್ದ ಸಂದರ್ಭದಲ್ಲಿಯೂ ಭಾರತದ ನಕ್ಷೆಯ ಮಹತ್ವವನ್ನು ಗುರುತಿಸಿ ಆಕ್ಷೇಪ ವ್ಯಕ್ತಪಡಿಸಿದ್ದು ಚಿಂತನಶೀಲ ನಡೆ ಎಂದು ಹೇಳಿದರು.
‘ನೀವು ಆಚರಿಸುತ್ತಿದ್ದ ಮತ್ತು ಕ್ರೀಡಾಕೂಟ ಮುಗಿದಿದ್ದ ಸಂದರ್ಭದಲ್ಲಿ ಆ ನಕ್ಷೆಯ ಮಹತ್ವವನ್ನು ಗುರುತಿಸಲು ಸಾಧ್ಯವಾಗಿದ್ದು ವಿಶೇಷ. ವೀಡಿಯೊ ಸಾಮಾನ್ಯವಾದದ್ದಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ಜನರು ಇದನ್ನು ಬಹಳ ಕಾಲ ನೆನಪಿಸಿಕೊಳ್ಳುತ್ತಾರೆ’ ಎಂದು ಮೋದಿ ಹೇಳಿದರು.
ಏನಾಗಿತ್ತು?
2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 10 ಬಾಕ್ಸಿಂಗ್ ಪದಕಗಳನ್ನು ಗೆದ್ದ ಬಳಿಕ ಭಾರತೀಯ ಬಾಕ್ಸಿಂಗ್ ತಂಡವು ಸಂಭ್ರಮಾಚರಣೆಯ ಭೋಜನಕ್ಕಾಗಿ ಗ್ಲಾಸ್ಕೋದ ರೆಸ್ಟೋರೆಂಟ್ಗೆ ತೆರಳಿತ್ತು. ರೆಸ್ಟೋರೆಂಟ್ ನ ಮೆನುವನ್ನು ನೋಡಿದಾಗ ಭಾರತದ ನಕ್ಷೆಯಿಂದ ಈಶಾನ್ಯ ಭಾಗವನ್ನು ಕಡಿತಗೊಳಿಸಿರುವುದನ್ನು ಲೊವಿನಾ ಗಮನಿಸಿದ್ದರು.
‘ದಯವಿಟ್ಟು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಇದರಿಂದ ನನಗೆ ಸ್ವಲ್ಪ ನೋವಾಯಿತು. ಭಾರತದ ನಕ್ಷೆಯಲ್ಲಿ ನಮ್ಮ ಈಶಾನ್ಯ ಭಾಗ ಕಾಣುತ್ತಿಲ್ಲ. ಹೊರಗಡೆಯಲ್ಲಿಯೂ ಪ್ರದರ್ಶಿಸಿರುವ ನಕ್ಷೆಯಲ್ಲಿ ಈಶಾನ್ಯ ಭಾಗವನ್ನು ಕತ್ತರಿಸಲಾಗಿದೆ. ಈಶಾನ್ಯದ ವ್ಯಕ್ತಿಯಾಗಿ ಇದು ನಮಗೆ ನಿಜವಾಗಿಯೂ ನೋವುಂಟು ಮಾಡುತ್ತದೆ. ನಾನು ಹೇಳಲು ಬಯಸಿದ್ದು ಇಷ್ಟೇ. ದಯವಿಟ್ಟು ಮುಂದಿನ ಬಾರಿ ಇದನ್ನು ನೆನಪಿನಲ್ಲಿಡಿ. ತುಂಬಾ ಧನ್ಯವಾದಗಳು’ ಎಂದು ಅವರು ರೆಸ್ಟೋರೆಂಟ್ ಆಡಳಿತಕ್ಕೆ ತಿಳಿಸಿದ್ದರು.
ಲೊವಿನಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದ ಬಳಿಕ ವಿರೂಪಗೊಂಡ ನಕ್ಷೆಯ ವಿಚಾರ ಬೆಳಕಿಗೆ ಬಂದಿತ್ತು. ಅವರು ರೆಸ್ಟೋರೆಂಟ್ನಲ್ಲಿ ಈ ಬಗ್ಗೆ ಮಾತನಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ವೀಡಿಯೊ ವೈರಲ್ ಆದ ಬಳಿಕ ‘ಮಿಸ್ಟರ್ ಸಿಂಗ್ ಇಂಡಿಯಾ’ ರೆಸ್ಟೋರೆಂಟ್ ವತಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿದ್ದಕ್ಕಾಗಿ ಕ್ಷಮೆಯಾಚಿಸಲಾಗಿತ್ತು.
‘ಭಾರತದ ಸರಿಯಾದ ನಕ್ಷೆಯನ್ನು ಒಳಗೊಂಡಂತೆ ನಮ್ಮ ಲೋಗೊವನ್ನು ಬದಲಾಯಿಸುತ್ತೇವೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ ಟೀಂ ಇಂಡಿಯಾಗೆ ಆತಿಥ್ಯ ನೀಡುವ ಅವಕಾಶ ದೊರೆತಿದ್ದು ನಮಗೆ ಗೌರವದ ಸಂಗತಿ. ಎಲ್ಲ ಕ್ರೀಡಾಪಟುಗಳು ಮತ್ತು ಅತಿಥಿಗಳು ರೆಸ್ಟೋರೆಂಟ್ ನಲ್ಲಿ ಉತ್ತಮ ಸಮಯ ಕಳೆದರು. ಈ ಸಂಭ್ರಮದ ನೆನಪುಗಳು ನಮ್ಮೊಂದಿಗೆ ಸದಾ ಉಳಿಯುತ್ತವೆ’ ಎಂದು ರೆಸ್ಟೋರೆಂಟ್ ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಗ್ಲಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಈ ವಿಷಯವನ್ನು ಗಮನಿಸಿದ್ದು, ರೆಸ್ಟೋರೆಂಟ್ ಸಂಸ್ಥೆಯ ಗಮನಕ್ಕೆ ತಂದಿತ್ತು.