ಮಂಗಳೂರು: ಮೀನುಗಾರಿಕೆ ನಿಷೇಧ ತೆರವಾದ 3ನೇ ದಿನ ಸಮುದ್ರಕ್ಕಿಳಿದ ಸುಮಾರು 100 ಟ್ರಾಲ್ ಬೋಟ್ಗಳು; ಮಲ್ಪೆಯಲ್ಲಿ ಇನ್ನೂ ಬಾಕಿ!

ಮಂಗಳೂರು: ಮೀನುಗಾರಿಕೆ ನಿಷೇಧ ತೆರವಾಗಿರುವ ಮೂರನೇ ದಿನವಾದ ಸೋಮವಾರ ಮಂಗಳೂರಿನಲ್ಲಿ ಆಳ ಸಮುದ್ರ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸುಮಾರು 100 ಟ್ರಾಲ್ ಬೋಟ್ಗಳು ಹಳೆ ಮಂಗಳೂರು ಮೀನುಗಾರಿಕಾ ಬಂದರಿನಿಂದ ಉತ್ತಮ ಮೀನುಗಾರಿಕೆ ಋತುವಿನ ನಿರೀಕ್ಷೆಯೊಂದಿಗೆ ಸಮುದ್ರದತ್ತ ಪ್ರಯಾಣ ಬೆಳೆಸಿವೆ.

ಕಳೆದ ಎರಡು ದಿನಗಳಿಂದ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಮತ್ತು ಬಲವಾದ ಗಾಳಿಯಿಂದಾಗಿ ಈ ಬೋಟ್ಗಳು ಬಂದರಿನಲ್ಲೇ ನಿಲ್ಲಿಸಲಾಗಿತ್ತು. ಡೀಸೆಲ್ ಮತ್ತು ಐಸ್ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರೂ, ಪ್ರತಿಕೂಲ ಹವಾಮಾನದಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗಿರಲಿಲ್ಲ. ಸೋಮವಾರ ಹವಾಮಾನದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಟ್ರಾಲ್ ಬೋಟ್ಗಳು ಒಂದೊಂದಾಗಿ ಅಳಿವೆ ಬಾಗಿಲಿನ ಮೂಲಕ ಸಮುದ್ರಕ್ಕಿಳಿದಿವೆ.ಉತ್ತಮ ಮೀನುಗಾರಿಕೆ ನಿರೀಕ್ಷೆಯೊಂದಿಗೆ ಸಮುದ್ರಕ್ಕೆ ತೆರಳಿರುವ ಈ ಬೋಟ್ಗಳು ಸುಮಾರು 10 ದಿನಗಳ ಬಳಿಕ ಮರಳಿ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಆಳ ಸಮುದ್ರದಲ್ಲಿ ಮೀನು ಸಂಪತ್ತು ಲಭ್ಯತೆಗೆ ಅನುಗುಣವಾಗಿ ಇನ್ನಷ್ಟು ಬೋಟ್ಗಳು ಸಮುದ್ರಕ್ಕಿಳಿಯಲಿವೆ ಎಂದು ಮೀನುಗಾರರು ತಿಳಿಸಿದ್ದಾರೆ.ಮಲ್ಪೆಯಲ್ಲಿ ಇನ್ನೂ ಸಮುದ್ರಕ್ಕಿಳಿಯದ ಮೀನುಗಾರಿಕಾ ದೋಣಿಗಳು
ಇನ್ನೊಂದೆಡೆ, ಸರ್ಕಾರ ಆಗಸ್ಟ್ 1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದ್ದರೂ, ಮಲ್ಪೆ ಮೀನುಗಾರಿಕಾ ಬಂದರಿನಿಂದ ಯಾವುದೇ ವರ್ಗದ ಮೀನುಗಾರಿಕಾ ದೋಣಿಗಳೂ ಇನ್ನೂ ಸಮುದ್ರಕ್ಕೆ ಇಳಿದಿಲ್ಲ.ಸಮುದ್ರ ಇನ್ನೂ ಪ್ರಕ್ಷುಬ್ಧವಾಗಿದ್ದು, ಬಲವಾದ ಗಾಳಿಯಿಂದಾಗಿ ಆಳ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿವೆ. ಈ ಪರಿಸ್ಥಿತಿಯಲ್ಲಿ ಮೀನುಗಾರಿಕಾ ಬಲೆಗಳನ್ನು ಹಾಕಲು ಸಾಧ್ಯವಾಗದ ಕಾರಣ ದೋಣಿಗಳನ್ನು ಸಮುದ್ರಕ್ಕಿಳಿಸಲು ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.