Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳ್ತಂಗಡಿ: ಕಪಿಲಾ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ 73 ವರ್ಷದ ವೃದ್ಧನ ರಕ್ಷಣೆ; ಭಾರಿ ಮಳೆಗೆ ಅಸ್ತವ್ಯಸ್ತಗೊಂಡ ಜನಜೀವನ!

Spread the love

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಡಿಗುಡ್ಡೆ ಸಮೀಪದ ಕಪಿಲಾ ನದಿಯಲ್ಲಿ ಸಿಲುಕಿಕೊಂಡಿದ್ದ 73 ವರ್ಷದ ವೃದ್ಧನನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಭಾರೀ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಿದ ಪರಿಣಾಮ ಬಾಲಪ್ಪ (73) ಎಂಬ ವೃದ್ಧ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದರು. ನದಿಯ ಮಧ್ಯದಲ್ಲಿ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣವೇ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ತಕ್ಷಣ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ರಮೇಶ್ ಬೈರಕಟ್ಟ ಹಾಗೂ ಸ್ಥಳೀಯ ಪರಿಣಿತ ಈಜುಗಾರ ಮೋಹನ ಗೌಡ ಬದ್ರಿಜಲು ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ವೆಂಟೆಡ್ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ, ಕಪಿಲಾ ನದಿಯ ಎರಡು ಶಾಖೆಗಳ ಮಧ್ಯೆ ಸಿಲುಕಿದ್ದ ಬಾಲಪ್ಪ ಅವರಿಗೆ ಮೊದಲು ಲೈಫ್ ಜಾಕೆಟ್ ಧರಿಸಿ, ಬಳಿಕ ಹಗ್ಗಗಳ ನೆರವಿನಿಂದ ಸುರಕ್ಷಿತವಾಗಿ ನದಿಯ ದಡಕ್ಕೆ ಕರೆತರಲಾಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ, ರೂಪೇಶ್ ಬೈಪಾಡಿ ಹಾಗೂ ದಿನೇಶ್ ಬಾಡಿಗುಡ್ಡೆ ಸಹ ಭಾಗವಹಿಸಿ ನೆರವಾದರು.ಇನ್ನೊಂದೆಡೆ, ಬುಧವಾರ ಸುರಿದ ಭಾರಿ ಮಳೆಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ಉಜಿರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಗಳಿಗೆ ಹರಿದು ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗಗಳಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರಂತರ ಮಳೆಯಿಂದ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಮಣ್ಣು-ಭಗ್ನಾವಶೇಷಗಳು ಸೇರಿ ನೀರಿನ ಹರಿವಿಗೆ ಅಡ್ಡಿಯಾಗುತ್ತಿರುವುದರಿಂದ ರಸ್ತೆಗಳು ಜಲಾವೃತವಾಗುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಚರಂಡಿಗಳನ್ನು ತಕ್ಷಣ ಸ್ವಚ್ಛಗೊಳಿಸಿ, ಮಳೆನೀರು ಸರಾಗವಾಗಿ ಹರಿಯುವಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *