ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಜಡೇಜಾ ಕಂಬ್ಯಾಕ್, ಸಾರಂಶ್ ಜೈನ್‌ಗೆ ಮೊದಲ ಅವಕಾಶ!

ಹೊಸದಿಲ್ಲಿ: ಆಗಸ್ಟ್ 15 ರಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟಿಂದ ವಿಶ್ರಾಂತಿ ಪಡೆದಿದ್ದ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ. ಇನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಲಭ್ಯವಿಲ್ಲದ ಕಾರಣ, ಆಫ್-ಸ್ಪಿನ್ನರ್ ಸಾರಂಶ್ ಜೈನ್ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ, ಪ್ರಮುಖ ಬ್ಯಾಟಿಂಗ್ ಬಳಗವನ್ನು ಉಳಿಸಿಕೊಳ್ಳಲಾಗಿದ್ದು, ತಂಡವು ನಿರೀಕ್ಷಿತ ರೀತಿಯಲ್ಲೇ ಇದೆ.

ಅಜಿತ್ ಅಗರ್ಕರ್ ನೇತೃತ್ವದ ಪುರುಷರ ಹಿರಿಯರ ಆಯ್ಕೆ ಸಮಿತಿಯು ಜಸ್ಟೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಿದ್ದು, ಆದರೆ ಅವರ ಭಾಗವಹಿಸುವಿಕೆಯು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (COE) ನೀಡುವ ಫಿಟ್‌ನೆಸ್ ಸಮ್ಮತಿಯನ್ನು ಅವಲಂಬಿಸಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಬುಮ್ರಾ ಹಾಗೂ ಶ್ರೀಲಂಕಾ ‘ಎ’ ವಿರುದ್ಧದ ಅತ್ಯುತ್ತಮ ಪ್ರದರ್ಶನದ ನೀಡಿರುವ ಗುರ್ನೂರ್ ಬ್ರಾರ್ ಇದ್ದಾರೆ.
ಸ್ಪಿನ್ ವಿಭಾಗದಲ್ಲಿ ಜಡೇಜಾ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ಮಾನವ್ ಸುತಾರ್ ಮತ್ತು ಸಾರಂಶ್ ಜೈನ್ ಇರಲಿದ್ದಾರೆ. ಸುತಾರ್ ಅಫ್ಘಾನಿಸ್ತಾನ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿದ್ದರೆ, ಸುಂದರ್ ಅವರ ಗೈರುಹಾಜರಿಯಲ್ಲಿ ಜೈನ್ ಅವರಿಗೆ ವಿಶೇಷ ಆಫ್-ಸ್ಪಿನ್ನರ್ ಆಗಿ ಆದ್ಯತೆ ನೀಡಲಾಗಿದೆ.
54 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 33 ವರ್ಷದ ಜೈನ್ ಆಯ್ಕೆಗಾರರ ಗಮನ ಸೆಳೆದಿದ್ದರು. ಇತ್ತೀಚಿನ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಅವರಿಗೆ ‘ಭಾರತ ಎ’ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಅಲ್ಲಿ ಅವರು ಅಂತಿಮ ಪಂದ್ಯದಲ್ಲಿ 6 ವಿಕೆಟ್ ಹಾಗೂ ಅಜೇಯ 70 ರನ್ ಗಳಿಸಿ ಮಿಂಚಿದ್ದರು.
ಸರಣಿಗಾಗಿ ಯಾವುದೇ ಫಿಟೈಸ್ ಅಪಾಯವನ್ನು ತೆಗೆದುಕೊಳ್ಳಲು ಆಯ್ಕೆಗಾರರು ಸಿದ್ಧರಿಲ್ಲದ ಕಾರಣ ಸುದರ್ಶನ್ ಹಾಗೂ ಬುಮ್ರಾ ರಿಗೆ ಫಿಟೈಸ್ ಪರೀಕ್ಷೆಗಳ ಷರತ್ತನ್ನು ಇಡಲಾಗಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 7 ರಿಂದ ಕೊಲಂಬೋದಲ್ಲಿ ಪ್ರಾರಂಭವಾಗುವ ನಾಲ್ಕು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಆಗಸ್ಟ್ ಮೊದಲ ವಾರದಲ್ಲೇ ಭಾರತ ತಂಡ ಶ್ರೀಲಂಕಾ ತಲುಪುವ ನಿರೀಕ್ಷೆಯಿದೆ.
ಸರಣಿಗೆ ಭಾರತ ತಂಡ: ಶುಬ್ ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್”, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್ಟೀತ್ ಬುಮ್ರಾ’, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಂಶ್ ಜೈನ್.