ಕುಟ್ಟಿಪುರಂ-ವಲಂಚೇರಿ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್.

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ-ವಲಂಚೇರಿ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಮೇಲ್ಸೇತುವೆ ಬಳಿ ಖಾಸಗಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಒಬ್ಬ ಪ್ರಯಾಣಿಕ ದುರಂತವಾಗಿ ಸಾವನ್ನಪ್ಪಿದ್ದು, ಸುಮಾರು 25 ಮಂದಿ ಗಾಯಗೊಂಡಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸ್ ಅತಿಯಾದ ವೇಗದಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದ್ದ ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಓರ್ವ ಪ್ರಯಾಣಿಕನನ್ನು ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ ಹೈಡ್ರಾಲಿಕ್ ರಕ್ಷಣಾ ಉಪಕರಣಗಳನ್ನು ಬಳಸಿ ವಾಹನ ಕತ್ತರಿಸಿ ಹೊರತೆಗೆದಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ವಲಂಚೇರಿ ಮತ್ತು ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
