ಹರ್ಯಾಣ: ದೇಶದ ಮೊದಲ ಹೈಡೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ!

ಚಂಡೀಗಢ: ದೇಶದಲ್ಲಿ ಶುದ್ಧ ಮತ್ತು ಹೆಚ್ಚು ಸುಸ್ಥಿರ ರೈಲ್ವೆ ಸಾರಿಗೆಗೆ ಉತ್ತೇಜನ ನೀಡುವ ಪ್ರಯತ್ನದ ಭಾಗವಾಗಿ ಶುಕ್ರವಾರ ಹರ್ಯಾಣದ ಜಿಂದ್ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೈಡೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಹೈಡೋಜನ್ ಇಂಧನ ಚಾಲಿತ ಈ ರೈಲು ಮೊದಲಿಗೆ ಉತ್ತರ ರೈಲ್ವೆ ವಲಯದಡಿ ಜಿಂದ್ ರೈಲ್ವೆ ನಿಲ್ದಾಣದಿಂದ ಸೋನಿಪತ್ ರೈಲ್ವೆ ನಿಲ್ದಾಣದವರೆಗೆ 89 ಕಿಮೀ ಮಾರ್ಗವನ್ನು ಕ್ರಮಿಸಲಿದೆ. ಈ ಮಾರ್ಗಮಧ್ವಜದಲ್ಲಿ ಈ ರೈಲು ಜಿಂದ್ ಜಂಕ್ಷನ್, ಗೊಹಾನ್ ಜಂಕ್ಷನ್ ಹಾಗೂ ಸೋನಿಪತ್ ಜಂಕ್ಷನ್ ಗಳನ್ನು ಸಂಪರ್ಕಿಸಲಿದೆ. ಅಲ್ಲದೆ ಈ ಮಾರ್ಗದಲ್ಲಿ ಹಲವು ನಿಲ್ದಾಣಗಳಲ್ಲಿ ನಿಲುಗಡೆಯೂ ಇರಲಿದೆ.

ರೈಲಿನ ಚಾವಣಿಯ ಮೇಲೆ ವಿದ್ಯುಚ್ಛಕ್ತಿ ತಂತಿಗಳನ್ನು ಹೊಂದಿರುವ ಸಾಂಪ್ರದಾಯಿಕ ವಿದ್ಯುತ್ ಚಾಲಿತ ರೈಲುಗಳಿಗೆ ಹೋಲಿಸಿದರೆ, ಹೈಡೋಜನ್ ರೈಲಿನಲ್ಲಿ ಹೈಡೋಜನ್ ಇಂಧನ ಕೋಶವನ್ನೇ ಅಳವಡಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಹೈಡೋಜನ್ ವಾತಾವರಣದಲ್ಲಿರುವ ಆಮ್ಲಜನಕದೊಂದಿಗೆ ಸಂಯೋಜನೆಗೊಂಡು ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೇವಲ ನೀರಿನ ಆವಿ ಮತ್ತು ಬಿಸಿ ಮಾತ್ರ ಉತ್ಪತ್ತಿಯಾಗುತ್ತದೆ.
ಈ ತಂತ್ರಜ್ಞಾನವು ಸ್ವಯಂಚಾಲಿತ ರೈಲುಗಳ ಪರಿಕಲ್ಪನೆಗೆ ಮರುಜೀವ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಜನಕ ಚಾಲಿತ ರೈಲುಗಳು ಪಳೆಯುಳಿಕೆ ಇಂಧನ ಮೂಲಗಳಾದ ಕಲ್ಲಿದ್ದಲು ಮತ್ತು ಡೀಸೆಲ್ ಅನ್ನು ಅವಲಂಬಿಸಿ ಕಾರ್ಯಾಚರಿಸುವ ರೈಲುಗಳ ಬದಲಿಗೆ ಹಳಿಗೆ ಇಳಿಯಲಿವೆ. ಪಳೆಯುಳಿಕೆ ಇಂಧನ ಚಾಲಿತ ವಾಹನಗಳಿಗೆ ಬಾಹ್ಯ ವಿದ್ಯುಚ್ಛಕ್ತಿ ಸರಬರಾಜಿನ ಅವಶ್ಯಕತೆಯೂ ಇದೆ ಎಂದು ಅವರು ಹೇಳಿದ್ದಾರೆ.
ಸುರಕ್ಷಿತ ಸಂಚಾರವನ್ನು ಖಾತರಿಗೊಳಿಸಲು ರೈಲಿನಲ್ಲಿ ವಿವಿಧ ಸುರಕ್ಷತಾ ಯಾಂತ್ರಿಕತೆಯನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಜಲಜನಕ ಸೋರಿಕೆ, ಅಧಿಕ ಬಿಸಿ, ಜ್ವಾಲೆಗಳು ಹಾಗೂ ಹೊಗೆಯನ್ನು ಪತ್ತೆ ಹಚ್ಚುತ್ತವೆ ಎಂದು ಹೇಳಲಾಗಿದೆ.
ರೈಲಿನಲ್ಲಿ ಅಳವಡಿಸಲಾಗಿರುವ ವ್ಯವಸ್ಥೆಗಳನ್ನು ನಿರಂತರವಾಗಿ ಪರಿಶೀಲಿಸಲು ಹಾಗೂ ಯಾವುದೇ ಸಂಭವನೀಯ ಅಪಾಯಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಸಮಗ್ರ ನಿಗಾವಣೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.