Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿವಾದ: ಸಂಸದ ಯದುವೀರ್‌ಗೆ ಶಾಸಕ ಅಶೋಕ್ ರೈ ತಿರುಗೇಟು!

Spread the love

ಮಂಗಳೂರು : “ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಬೇಕು ಎನ್ನುವುದು ಕರಾವಳಿ ಹಾಗೂ ಮೈಸೂರು ಭಾಗದ ಜನರ ಆಶಯವಾಗಿದೆ. ಈ ಸಾಂಸ್ಕೃತಿಕ ಕ್ರೀಡೆಗೆ ರಾಜಕೀಯ ಬಣ್ಣ ಬಳಿಯಬಾರದು. ಒಂದು ವೇಳೆ ಜನರಿಗೆ ಮತ್ತು ಸರ್ಕಾರಕ್ಕೆ ಬೇಡವೆಂದರೆ ನಾವು ಹಠಕ್ಕೆ ಬಿದ್ದು ಕಂಬಳ ಮಾಡುವುದಿಲ್ಲ” ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಮೈಸೂರಿನಲ್ಲಿ ಕಂಬಳ ಆಯೋಜನೆ ಮಾಡುವುದಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಘಟಕರು, “ಸಂಸದರಿಗೆ ಕರಾವಳಿಯ ಸಂಸ್ಕೃತಿ ಮತ್ತು ಕಂಬಳದ ಬಗ್ಗೆ ಎಷ್ಟು ಅರಿವಿದೆ ಎಂಬುದು ಗೊತ್ತಿಲ್ಲ. ನಾವು ಅವರನ್ನು ಖುದ್ದಾಗಿ ಭೇಟಿ ಮಾಡಿ, ಅವರ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಕಂಬಳದ ಉಳಿವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಟ್ಟಾಗಿ ಶ್ರಮಿಸಿವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ” ಎಂದು ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವಾಗಲೂ ಇಂತಹದ್ದೇ ವಿರೋಧ ವ್ಯಕ್ತವಾಗಿತ್ತು. “ಆಗ ಮಹಾರಾಣಿಯವರು ಕಂಬಳಕ್ಕೆ ಆಕ್ಷೇಪವೆತ್ತಿ, ರಾಜಮನೆತನಕ್ಕೂ ಕುದುರೆಗಳಿಗೂ ಇರುವ ಸಂಬಂಧ ಕೋಣಗಳಿಗೂ ಇಲ್ಲ ಎಂದಿದ್ದರು. ಆದರೆ, ನಾವು ‘ಪ್ರಶ್ನೆ ಚಿಂತನೆ’ ನಡೆಸಲು ಕೋರಿದಾಗ, ಅದಕ್ಕೆ ಒಪ್ಪಿದ್ದರು. ಆ ಬಳಿಕ ಹಿಂದಿನ ರಾಜಮನೆತನದಲ್ಲಿ ಕೋಣಗಳಿಗೂ ಆದ್ಯತೆ ಇತ್ತು ಎಂಬುದು ಪ್ರಶ್ನೆ ಚಿಂತನೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, 15 ದಿನಗಳ ನಂತರ ಮಹಾರಾಣಿಯವರೇ ಸ್ವತಃ ಕರೆದು ನಮಗೆ ಅನುಮತಿ ನೀಡಿದ್ದರು” ಎಂದು ಸಂಘಟಕರು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

“ಮೈಸೂರಿನಲ್ಲಿ ಕಂಬಳ ಮಾಡುವುದರಿಂದ ನಮಗೆ ಯಾವುದೇ ವೈಯಕ್ತಿಕ ಲಾಭ ಅಥವಾ ಪ್ರತಿಷ್ಠೆ ಬೇಕಾಗಿಲ್ಲ. ಹಗಲು-ರಾತ್ರಿ ಕಣ್ಣು ಬಿಟ್ಟು ಕೆಲಸ ಮಾಡುವ ಕಂಬಳ ನಿರ್ವಹಣಾ ಸಮಿತಿಗೆ ಸಿಗುವುದು ಕೇವಲ ತೃಪ್ತಿ ಮಾತ್ರ. ಕಂಬಳಕ್ಕೆ ವಾರ್ಷಿಕ ಕನಿಷ್ಠ ₹5 ಕೋಟಿ ಸರ್ಕಾರಿ ಅನುದಾನ ಸಿಗಬೇಕು ಮತ್ತು ಇದು ರಾಜ್ಯ ಮಟ್ಟದಲ್ಲಿ ದೊಡ್ಡ ಕ್ರೀಡೆಯಾಗಿ ಬೆಳೆಯಬೇಕು ಎನ್ನುವುದು ನಮ್ಮ ಕನಸು. ಕರಾವಳಿ ಭಾಗದ ಜನರ ಹಕ್ಕನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕಂಬಳದಿಂದ ನಮಗೆ ಗೌರವ ಬಂದಿದೆಯೇ ಹೊರತು, ನಮ್ಮಿಂದ ಕಂಬಳಕ್ಕಲ್ಲ. ಎಲ್ಲರಿಗೂ ಬೇಕೆಂದರೆ ಮಾತ್ರ ನಾವು ಮುಂದೆ ಹೆಜ್ಜೆ ಇಡುತ್ತೇವೆ, ಬೇಡವೆಂದರೆ ನಮ್ಮದೇನೂ ಹಠವಿಲ್ಲ” ಎಂದು ಕಂಬಳ ಪ್ರೇಮಿಗಳು ಮುಕ್ತವಾಗಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *