ಮಾಣಿ: ಹೆದ್ದಾರಿಗೆ ಅಡ್ಡಲಾಗಿ ಉರುಳಿದ ಬೃಹತ್ ಮರ; ಕೆಲಕಾಲ ಸ್ಥಗಿತಗೊಂಡ ಸಂಚಾರ!

ವಿಟ್ಲ/ಬಂಟ್ವಾಳ : ಇಲ್ಲಿನ ಮಾಣಿ ಸಮೀಪದ ಮಾಣಿ–ಮೈಸೂರು ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸುರಿದ ಭಾರಿ ಗಾಳಿ–ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಯ ಮಧ್ಯಕ್ಕೆ ಉರುಳಿ ಬಿದ್ದ ಪರಿಣಾಮ ಹೆದ್ದಾರಿ ಸಂಚಾರ ಕೆಲಕಾಲ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಮುಂಜಾನೆಯ ಬಿಡುವಿಲ್ಲದ ವೇಳೆಯಲ್ಲೇ ಈ ಘಟನೆ ಸಂಭವಿಸಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಉದ್ಯೋಗಕ್ಕೆ ತೆರಳುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮಂಗಳವಾರ ಮುಂಜಾನೆ ವಿಟ್ಲ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಇದರ ಪರಿಣಾಮವಾಗಿ ಮಾಣಿ ಸಮೀಪ ಹೆದ್ದಾರಿಗೆ ಪಕ್ಕದಲ್ಲಿದ್ದ ದೈತ್ಯ ಮರವೊಂದು ಏಕಾಏಕಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ಪರಿಣಾಮ ಉಪ್ಪಿನಂಗಡಿ, ಪುತ್ತೂರು ಹಾಗೂ ಮೈಸೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಯಿತು. ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡ ತಕ್ಷಣವೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು, ವಾಹನ ಸವಾರರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದರು. ವಾಹನಗಳನ್ನು ಕೊಡಾಜೆ ಗಡಿ–ಬೊಲ್ಲುಕಲ್ಲು ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಬದಲಿ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣವೇ ಜೆಸಿಬಿ ಹಾಗೂ ಮರ ಕಟಾವು ಯಂತ್ರಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದಿದ್ದ ಮರದ ಕೊಂಬೆಗಳನ್ನು ಕತ್ತರಿಸಿ ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕ, ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಸುಗಮಗೊಂಡಿತು.