ಬೀದರ್: ಪತ್ನಿಯ ಕೊಲೆ ಮಾಡಿದ ಸೈನಿಕ ಪತಿ; ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೃತ್ಯ!

ಬೀದರ್ : ಪತಿಯೊಬ್ಬ ಪತ್ನಿಯ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಎರಡು ದಿನಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಮೃತಪಟ್ಟ ಮಹಿಳೆ. ಕೊಲೆ ಆರೋಪದ ಮೇಲೆ ಭಾರತೀಯ ಸೇನೆಯ ಸೈನಿಕನನ್ನು ಬಂಧಿಸಲಾಗಿದೆ. ಆರೋಪಿಯನ್ನು ಭಗವತ್ ಜ್ಞಾನೇಶ್ವರ್ ಎಂದು ಗುರುತಿಸಲಾಗಿದೆ.
ಭಾಲ್ಕಿ ತಾಲ್ಲೂಕಿನ ಬೋಲೆಗಾವೊ ಗ್ರಾಮದ ನಿವಾಸಿ ಮತ್ತು ಇತ್ತೀಚೆಗೆ ಜೋಧ್ಪುರದಿಂದ ಸಿಕಂದರಾಬಾದ್ಗೆ ವರ್ಗಾವಣೆಗೊಂಡ ಸೈನಿಕ ಭಾಗವತ್ ಜೂನ್ 25 ರಂದು 10 ದಿನಗಳ ರಜೆಯ ಮೇಲೆ ಮನೆಗೆ ಬಂದಿದ್ದರು. ಅದೇ ರಾತ್ರಿ, ತನ್ನ ಪತ್ನಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ, ಆಕೆಯ ಪೋಷಕರ ಮನೆಗೆ ಭೇಟಿ ನೀಡುವುದಾಗಿ ಮತ್ತು ದಾರಿಯಲ್ಲಿ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ್ದರು.
ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಬೀದರ್ ನಗರದ ಶಿವನಗರದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಸಂಜನಾ ಮತ್ತು ಭಗವತ್ ವಿವಾಹವಾಗಿತ್ತು
ವರ್ಷದ ಹಿಂದೆ ಸಂಜನಾಗೆ ನೀರಿನಲ್ಲಿ ಕೀಟನಾಶಕ ಬೆರೆಸಿ ನೀಡಲು ಯತ್ನಿಸಲಾಗಿತ್ತು. ಈ ಬಗ್ಗೆ ಅನುಮಾನ ವ್ಯಕ್ತವಾದ ನಂತರ ಸಂಜನಾ ಕೆಲ ತಿಂಗಳು ತವರು ಮನೆಯಲ್ಲಿ ಉಳಿದು, ಬಳಿಕ ಮತ್ತೆ ಗಂಡನ ಮನೆಗೆ ತೆರಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 25ರಂದು ಸಂಜೆ ಮೈಲಾರ ಮಲ್ಲಣ್ಣ ದೇವಸ್ಥಾನ ದರ್ಶನಕ್ಕೆ ಹೋಗಿ, ಅಲ್ಲಿಂದ ತವರು ಮನೆಗೆ ಹೋಗೋಣ ಎಂದು ಹೇಳಿ ಪತಿ ಭಾಗವತ್ ಪತ್ನಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ. ದೇವಸ್ಥಾನದಿಂದ ಹಿಂದಿರುಗುವ ವೇಳೆ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಕಬ್ಬಿಣದ ರಾಡ್ನಿಂದ ತಲೆ ಹಾಗೂ ಕತ್ತಿನ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಸಂಜನಾಳನ್ನು ಬೀದರ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ತನ್ನ ಮೇಲೆ ಗಂಡನೇ ಹಲ್ಲೆ ನಡೆಸಿರುವ ವಿಷಯವನ್ನು ಸಂಜನಾ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾರಳೆ. ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪತಿ ವಿವಾಹೇತರ ಸಂಬಂಧ ಹೊಂದಿದ್ದನ್ನು ಸಂಜನಾ ಪ್ರಶ್ನಿಸಿದ್ದಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.