Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಿಎಂಸಿ ಬಂಡಾಯ: ಮಮತಾ ಬ್ಯಾನರ್ಜಿ ಹುದ್ದೆಯಿಂದ ಉಚ್ಚಾಟನೆ; ಹೊಸ ನಾಯಕತ್ವ ರಚಿಸಿದ ಬಂಡಾಯ ಬಣ!

Spread the love

ಕೊಲ್ಕಾತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ಬಣವು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷರ ಹುದ್ದೆಯಿಂದ ಉಚ್ಚಾಟಿಸಿರುವುದಾಗಿ ಮತ್ತು ಹೊಸ ನಾಯಕತ್ವದ ರಚನೆಯನ್ನು ಮಾಡಿರುವುದಾಗಿ ಘೋಷಿಸಿದೆ.
ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಭಿನ್ನಮತೀಯರ ಗುಂಪು, ತಮಗೆ ಪಕ್ಷದ ಶಾಸಕರು ಮತ್ತು ಪದಾಧಿಕಾರಿಗಳ ಗಣನೀಯ ಬೆಂಬಲ ಲಭಿಸಿದೆ. ಕೊಲ್ಕತ್ತಾದ ಮಾಜಿ ಮೇಯರ್ ಫಿರ್ಹಾದ್ ಹಕೀಮ್ ಸೇರಿದಂತೆ ಮಮತಾ ಬ್ಯಾನರ್ಜಿ ಅವರ ಹಲವು ಆಪ್ತರು ಬಂಡಾಯ ಬಣವನ್ನು ಸೇರಿದ್ದಾರೆ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಮೊದಲ ಬಜೆಟ್ ಮಂಡಿಸಿದ ದಿನವೇ ಈ ಬೆಳವಣಿಗೆಗಳು ನಡೆದಿವೆ.

ಭಿನ್ನಮತೀಯ ತೃಣಮೂಲ ಶಾಸಕರು ಕೊಲ್ಕತ್ತಾದ ನ್ಯೂ ಟೌನ್ ಪ್ರದೇಶದ ಪಂಚತಾರಾ ಹೋಟೆಲ್‌ನಲ್ಲಿ ಸಭೆ ಸೇರಿದ್ದು ಹಾಲಿ ಮತ್ತು ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಮತ್ತು ಕೌನ್ಸಿಲರ್‌ಗಳು ಸೇರಿದಂತೆ ಸುಮಾರು 500 ತೃಣಮೂಲ ನಾಯಕರು ಈ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದರು ಎಂದು ಬಂಡಾಯ ಬಣದ ನಾಯಕರು ತಿಳಿಸಿದ್ದಾರೆ.
ಆ ಸಭೆಯಲ್ಲಿ 30 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಶಾಸಕ ಅರೂಪ್ ರಾಯ್‌ರನ್ನು ಧ್ವನಿ ಮತದ ಮೂಲಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿರಿಯ ನಾಯಕರಿಗೆ ಹೊಸ ರಚನೆಯಲ್ಲಿ ತಕ್ಷಣವೇ ಜವಾಬ್ದಾರಿಗಳನ್ನು ನೀಡಲಾಗಿದೆ. ಉಪಾಧ್ಯಕ್ಷರುಗಳಾಗಿ ಫರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ರಥಿನ್ ಘೋಷ್ ಮತ್ತು ಸಬೀನಾ ಯಾಸ್ಮಿನ್ ಅವರನ್ನು ಹೆಸರಿಸಲಾಗಿದ್ದು, ರಿತಬ್ರತಾ ಬ್ಯಾನರ್ಜಿ, ಜಾವೇದ್ ಖಾನ್ ಮತ್ತು ಸಂದೀಪನ್ ಸಹಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಅಬ್ರುಜ್ಜಮಾನ್ ಅನ್ಸಾರಿ ಅವರನ್ನು ಖಜಾಂಚಿಯಾಗಿ ನೇಮಿಸಲಾಯಿತು ಎಂದು ಬಂಡಾಯ ಬಣ ತಿಳಿಸಿದೆ.

ಮಮತಾ ಬ್ಯಾನರ್ಜಿ ಅವರು ಮುಖ್ಯ ಸಲಹೆಗಾರರಾಗಲು ಬಯಸಿದರೆ, ಅವರಿಗೆ ಪ್ರೀತಿಯ ಸ್ವಾಗತ ಎಂದು ಸಭೆಯ ನಂತರ ರಿತಬ್ರತಾ ಬ್ಯಾನರ್ಜಿ ಹೇಳಿದರು.
ಯಾವುದು ನೈಜ ಪಕ್ಷ ಎಂಬ ಚರ್ಚೆ ಇಲ್ಲ. ಈ ಪ್ರಕ್ರಿಯೆಗಳು ಪಕ್ಷದ ಸಂವಿಧಾನದ ಪ್ರಕಾರವೇ ನಡೆದಿವೆ. ನಮ್ಮ ವಿಶೇಷ ಅಧಿವೇಶನದ ನಡವಳಿಗಳ ಬಗ್ಗೆ ಔಪಚಾರಿಕವಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ. ನಾವು ಶೀಘ್ರದಲ್ಲೇ ಜಿಲ್ಲಾ ಸಮಿತಿಗಳು, ರಾಜ್ಯ ಘಟಕ ಮತ್ತು ವಕ್ತಾರ ಸಮಿತಿಗಳನ್ನು ರಚಿಸಲಿದ್ದೇವೆ ಎಂದು ಅವರು ಹೇಳಿದರು.
ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಪುನರ್‌ರಚಿಸಬೇಕಾಗುತ್ತದೆ. ಅಂತಹ ಸಮಿತಿಯನ್ನು ಫೆಬ್ರವರಿ 2022ರಲ್ಲಿ ಕೊನೆಯದಾಗಿ ರಚಿಸಲಾಗಿತ್ತು ಮತ್ತು ಅದರ ಅವಧಿ ಮುಗಿದ ನಂತರ ಅದನ್ನು ನವೀಕರಿಸಲಾಗಿರಲಿಲ್ಲ ಎಂದು ರಿತಬ್ರತಾ ಬ್ಯಾನರ್ಜಿ ಹೇಳಿದರು.

ಬಂಡಾಯಗಾರರು ತಮ್ಮ ಸಂಘಟನಾ ರಚನೆಯನ್ನು ಘೋಷಿಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ನಾಯಕತ್ವವು ಭಿನ್ನಮತೀಯರೊಂದಿಗೆ ಗುರುತಿಸಿಕೊಂಡಿರುವ ಹಲವು ನಾಯಕರ ವಿರುದ್ಧ ಶಿಸ್ತು ಕ್ರಮದ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
ಉದ್ದೇಶಪೂರ್ವಕವಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ಫರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಅರೂಪ್ ರಾಯ್, ಜಾವೇದ್ ಖಾನ್, ರಥಿನ್ ಘೋಷ್, ಬಿಪ್ಲಬ್ ಮಿತ್ರಾ, ಸ್ನೇಹಶಿಶ್ ಚಕ್ರವರ್ತಿ, ಸಬೀನಾ ಯಾಸ್ಮಿನ್ ಮತ್ತು ಇತರರಿಗೆ ಪಕ್ಷದ ಶಿಸ್ತು ಸಮಿತಿಯು ಕಾರಣ ಕೇಳಿ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *