ಕೊಚ್ಚಿ: ಮಲಯಾಳಂ ಚಿತ್ರರಂಗದ ಅಮ್ಮಾ ಸಂಘದಲ್ಲಿ ಬಿಕ್ಕಟ್ಟು; ಅಧ್ಯಕ್ಷೆ ಶ್ವೇತಾ ಮೆನನ್ ಸೇರಿ ಇಡೀ ಸಮಿತಿ ರಾಜೀನಾಮೆ!

ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮಾದ ಅಧ್ಯಕ್ಷೆ ಶ್ವೇತಾ ಮೆನನ್ ಹಾಗೂ ಅವರ ನೇತೃತ್ವದ 17 ಸದಸ್ಯರ ಕಾರ್ಯಕಾರಿ ಸಮಿತಿಯು ರವಿವಾರ ರಾಜೀನಾಮೆ ನೀಡಿದೆ.
ಕಲಾವಿದರ ಸಂಘಟನೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿನ ಬೆಳವಣಿಗೆಗಳು, ತೀವ್ರ ವಾಗ್ವಾದ ಹಾಗೂ ಆರೋಪ-ಪ್ರತ್ಯಾರೋಪಗಳ ಬಳಿಕ ಈ ನಿರ್ಧಾರ ಪ್ರಕಟವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಸಂಘದೊಳಗೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳ ಹೇಳಿಕೆಗೆ ಅನುಮೋದನೆ ಪಡೆಯುವ ವಿಚಾರವಾಗಿ ಹಲವು ಗಂಟೆಗಳ ಕಾಲ ನಡೆದ ಬಿರುಸಿನ ಚರ್ಚೆಯ ಬಳಿಕ ರಾಜೀನಾಮೆ ಘೋಷಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕುಕು ಪರಮೇಶ್ವರನ್ ಮಂಡಿಸಿದ್ದ ವಾರ್ಷಿಕ ವರದಿಯಲ್ಲಿನ ಆದಾಯ ಮತ್ತು ವೆಚ್ಚದ ವಿವರಗಳಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂದು ಸದಸ್ಯರ ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿತು. ಇದರಿಂದ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು.
ವಿವಾದ ತಾರಕಕ್ಕೇರುತ್ತಿದ್ದಂತೆ ಮೆನನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನೇತೃತ್ವದ ಸಂಪೂರ್ಣ ಕಾರ್ಯಕಾರಿ ಸಮಿತಿಯೂ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು.
“ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ನಾನು ನನ್ನ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಸಂಸ್ಥೆಯನ್ನು ತೊರೆದಿದ್ದೇನೆ” ಎಂದು ಹೇಳಿದರು.
ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ ‘ಅಮ್ಮಾ’ದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದರು. ಇನ್ನು ಮುಂದೆ ಸಂಸ್ಥೆಯೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದರು.
ಸಂಘದ ಖಜಾಂಚಿ ಲಭ್ಯವಿಲ್ಲದ ಕಾರಣ ನಿರ್ದಿಷ್ಟ ಅವಧಿಯ ಲೆಕ್ಕಪತ್ರಗಳನ್ನು ಮಂಡಿಸಲು ಸಾಧ್ಯವಾಗಲಿಲ್ಲ ಎಂದು ಮೆನನ್ ಆರೋಪಿಸಿದರು.
“ಸಂಸ್ಥೆಯ ಖಜಾಂಚಿ ಲಭ್ಯವಿಲ್ಲ. ಸಿಬ್ಬಂದಿಯೊಬ್ಬರನ್ನು ವಜಾಗೊಳಿಸಿದ ಬಳಿಕ ದಾಖಲಾದ ದೂರಿನ ಸಮಸ್ಯೆಯೂ ಬಗೆಹರಿದಿಲ್ಲ. ಖಜಾಂಚಿ ಲಭ್ಯವಿಲ್ಲದ ಕಾರಣ ಆ ಅವಧಿಯ ಖಾತೆಗಳನ್ನು ಮಂಡಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.
ತಮ್ಮ ಸಮಿತಿಯು ಸೆಪ್ಟೆಂಬರ್ 1ರಿಂದ ನಿರ್ವಹಿಸಿದ್ದ ಖಾತೆಗಳು ಸರಿಯಾಗಿದ್ದವು. ಆದರೆ ಹಿಂದಿನ ಸಮಿತಿಯ ಅವಧಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಗೆಹರಿಯದೆ ಉಳಿದಿದ್ದವು ಎಂದು ಅವರು ಹೇಳಿದರು.
ಸಂಸ್ಥೆಯೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿರುವುದರಿಂದ ನಿರಾಳತೆ ಅನುಭವಿಸುತ್ತಿದ್ದೇನೆ ಎಂದೂ ಮೆನನ್ ಹೇಳಿದರು.
ಈ ಹಿಂದೆ ಆರೋಪಗಳನ್ನು ಎದುರಿಸಿದ್ದವರ ಕೈಗೆ ಸಂಘವನ್ನು ಮತ್ತೆ ಹಸ್ತಾಂತರಿಸಲು ಪ್ರಯತ್ನ ನಡೆಯುತ್ತಿದೆ. ಕಾರ್ಯಕಾರಿ ಸಮಿತಿಯ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕುವಂತೆ ಕೆಲ ಸದಸ್ಯರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಮೆನನ್ ಆರೋಪಿಸಿದರು.
“ನಮಗೆ ತಿಳಿಸದೆ ನಮ್ಮನ್ನು ತೆಗೆದುಹಾಕುವ ಕಾರ್ಯಸೂಚಿ ಇತ್ತು. ನನಗೆ ನನ್ನದೇ ಆದ ವ್ಯಕ್ತಿತ್ವವಿದೆ. ನನ್ನ ಅಭಿಪ್ರಾಯವನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾವು ಕೈಗೊಂಬೆಗಳಾಗಿದ್ದರೆ ಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಆದರೆ ನಾನು ಕೈಗೊಂಬೆಯಾಗಲು ಸಿದ್ಧಳಿಲ್ಲ” ಎಂದು ಅವರು ಹೇಳಿದರು.