ಸಾಂಬಾರ್ ಕೊಡಲಿಲ್ಲವೆಂದು ಸಿಬ್ಬಂದಿ ಮೇಲೆ ಚಪ್ಪಲಿ ಎಸೆದ ಮಹಿಳೆ!

ಊಟದ ವೇಳೆ ಹೆಚ್ಚುವರಿ ಸಾಂಬಾರ್ ನೀಡದ ಕಾರಣಕ್ಕೆ ಗ್ರಾಹಕಿಯೊಬ್ಬರು ಕ್ಯಾಂಟೀನ್ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಏಮ್ಸ್ ಕ್ಯಾಂಟೀನ್‌ನಲ್ಲಿ ನಡೆದಿದೆ. ಕ್ಯಾಂಟೀನ್‌ಗೆ ಬಂದಿದ್ದ ಮಹಿಳಾ ಗ್ರಾಹಕರೊಬ್ಬರು ಊಟ ಮಾಡುತ್ತಿದ್ದಾಗ ಮತ್ತೊಮ್ಮೆ ಸಾಂಬಾರ್ ಬಡಿಸುವಂತೆ ಕೇಳಿದ್ದಾರೆ. ಆದರೆ, ಈಗಾಗಲೇ ಅವರಿಗೆ ಮೂರು ಬಾರಿ ಸಾಂಬಾರ್ ಹಾಕಿದ್ದರಿಂದ, ಮತ್ತೊಮ್ಮೆ ಬಡಿಸಲು ಕ್ಯಾಂಟೀನ್ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಸಿಬ್ಬಂದಿ ಜೊತೆ ತೀವ್ರ ವಾಕ್ಸಮರಕ್ಕೆ ಇಳಿದಿದ್ದಾರೆ.
ಇಬ್ಬರ ನಡುವಿನ ಜಗಳ ತಾರಕಕ್ಕೇರಿದಾಗ, ಮಹಿಳೆ ತನ್ನ ಆಕ್ರೋಶ ತಡೆಯಲಾರದೆ ಸಿಬ್ಬಂದಿ ಮೇಲೆ ಚಪ್ಪಲಿ ಎಸೆದು ದಾಳಿ ನಡೆಸಿದ್ದಾರೆ. ಪಕ್ಕದಲ್ಲಿದ್ದವರು ಆಕೆಯನ್ನು ತಡೆಯಲು ಯತ್ನಿಸಿದರೂ ಕೇಳದ ಮಹಿಳೆ, ಸಿಬ್ಬಂದಿಯೊಂದಿಗೆ ದಬಾಯಿಸಿ ಹಲ್ಲೆ ಮುಂದುವರಿಸಿದ್ದಾರೆ. ಈ ಇಡೀ ಘಟನೆಯು ಕ್ಯಾಂಟೀನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಣ್ಣ ವಿಷಯಕ್ಕೆ ಈ ಮಟ್ಟಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಮಹಿಳೆಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
