ಕೋಲ್ಕತ್ತಾ: ಟಿಎಂಸಿಯ ಎಲ್ಲಾ ಮುಂಚೂಣಿ ಸಂಘಟನೆಗಳು, ಸಮಿತಿಗಳು ದಿಢೀರ್ ವಿಸರ್ಜನೆ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬುಧವಾರ ಪಶ್ಚಿಮ ಬಂಗಾಳದಲ್ಲಿ ತನ್ನ ಎಲ್ಲಾ ಸಮಿತಿಗಳನ್ನು, ಮುಂಚೂಣಿ ಸಂಘಟನೆಗಳನ್ನು ವಿಸರ್ಜಿಸಿದೆ. ರಿತಬ್ರತಾ ಬ್ಯಾನರ್ಜಿ ಸುಮಾರು 60 ಶಾಸಕರ ಬೆಂಬಲ ಪತ್ರದೊಂದಿಗೆ ರಾಜ್ಯಪಾಲ ರತೀಂದ್ರ ಬೋಸ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಪ್ರಕಟಣೆ ನೀಡಿರುವ ಟಿಎಂಸಿ, ಎಲ್ಲಾ ಹಂತದ ಸಮಗ್ರ ಆತ್ಮಾವಲೋಕನ, ಕಾರ್ಯಕ್ಷಮತೆಯ ಪರಿಶೀಲನೆ, ಸಾಂಸ್ಥಿಕ ಮೌಲ್ಯಮಾಪನ ನಡೆಸಲಾಗುವುದು. ಇದರ ಜೊತೆಗೆ, ಪಕ್ಷದ ಮೂಲ ಸಂಘಟನೆ ಹಾಗೂ ಎಲ್ಲಾ ಮುಂಚೂಣಿ ಘಟಕಗಳನ್ನು ಮರುಸಂಘಟಿಸಿ, ಹೊಸ ಸಮಿತಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದೆ.
15 ವರ್ಷಗಳ ಆಡಳಿತದ ನಂತರ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಸೋತ ಬಳಿಕ ಟಿಎಂಸಿಯಲ್ಲಿ ಬಂಡಾಯ ಉಲ್ಬಣಗೊಂಡಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಬುಧವಾರ ಉಚ್ಚಾಟಿತ ಟಿಎಂಸಿ ಶಾಸಕ ರಿತಬ್ರಾತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ತಮಗೆ 59 ಶಾಸಕರ ಬೆಂಬಲವಿರುವುದಾಗಿ ಹೇಳಿಕೊಂಡಿದ್ದಾರೆ. ಶಾಸಕ ರಿತಬ್ರಾತ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಬೆಂಬಲಿಗ ಶಾಸಕರ ಪಟ್ಟಿಯೊಂದಿಗೆ ಆಗಮಿಸಿರುವ ಬಗ್ಗೆಯೂ ವರದಿಯಾಗಿತ್ತು.
