ಕುವೈತ್: ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ಅಟ್ಯಾಕ್; ಕ್ಷಿಪಣಿಗಳನ್ನು ಹೊಡೆದುರುಳಿಸಿದ ವಾಯುರಕ್ಷಣಾ ಪಡೆ

ಕುವೈತ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ದೇಶದ ವಿವಿಧ ಕಡೆಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ, ಒಳಮುಖ ಕ್ಷಿಪಣಿ ಹಾಗೂ ಡೋನ್‌ಗಳನ್ನು ವಾಯುರಕ್ಷಣಾ ವ್ಯವಸ್ಥೆ ಛೇದಿಸುತ್ತಿದೆ ಎಂದು ಕುವೈತ್ ಬುಧವಾರ ಪ್ರಕಟಿಸಿದೆ.
ಸರ್ಕಾರಿ ಸ್ವಾಮ್ಯದ ಪ್ರಸಾರಸಂಸ್ಥೆ ಐಆರ್‌ಐಬಿ ಪ್ರತ್ಯೇಕ ಹೇಳಿಕೆ ನೀಡಿ, ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿ ಮಾಡಿ ಇರಾನ್ ದಾಳಿ ನಡೆಸಿದೆ ಎಂದು ಪ್ರಕಟಿಸಿದೆ. ಪರ್ಶಿಯನ್ ಕೊಲ್ಲಿ ಹಾರ್ಮುಝ್ ಜಲಸಂಧಿ ಮತ್ತು ಕ್ವೆಸ್ಟ್ ದ್ವೀಪದಲ್ಲಿ ಅಮೆರಿಕದ ದ್ವೇಷದ ಕ್ರಮಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಿದೆ.

ಶತ್ರುದೇಶಗಳ ವೈಮಾನಿಕ ಗುರಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವಾಯುರಕ್ಷಣಾ ಘಟಕಗಳು ನಡೆಸಿದ ಕಾರ್ಯಾಚರಣೆಗಳ ಕಾರಣದಿಂದ ನಿವಾಸಿಗಳಿಗೆ ದೊಡ್ಡ ಶಬ್ದಗಳು ಕೇಳಿಬಂದಿವೆ ಎಂದು ಕುವೈತ್ ಸೇನೆಯ ಸಿಬ್ಬಂದಿ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. “ಕುವೈತ್‌ನ ವಾಯುರಕ್ಷಣಾ ವ್ಯವಸ್ಥೆ ಪ್ರಸ್ತುತ ವಿರೋಧಿ ಕ್ಷಿಪಣಿಗಳು ಮತ್ತು ಡೋನ್ ದಾಳಿಗಳನ್ನು ಎದುರಿಸುತ್ತಿವೆ. ದೊಡ್ಡ ಸದ್ದುಗಳು ಕೇಳಿಬಂದರೆ ಅದು ವಾಯುರಕ್ಷಣಾ ವ್ಯವಸ್ಥೆಗಳು ವಿರೋಧಿ ದಾಳಿಗಳನ್ನು ಛೇದಿಸುವ ಕಾರ್ಯಾಚರಣೆಗೆ ಸಂಬಂಧಪಟ್ಟದ್ದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಅವಶೇಷಗಳು, ಗುಂಡಿನ ಚೂರು ಅಥವಾ ಅಪರಿಚಿತ ಸಾಧನಗಳ ಬಳಿಗೆ ತೆರಳದಂತೆ ಸಾರ್ವಜನಿಕರಿಗೆ ಸೇನೆ ಎಚ್ಚರಿಕೆ ನೀಡಿದ್ದು, ಇದು ಡೋನ್ ಹಾಗೂ ಕ್ಷಿಪಣಿಗಳ ಛೇದನದ ಸಂದರ್ಭ ಬಿದ್ದಿರುವ ಸಾಧ್ಯತೆ ಇದೆ. ಇಂಥ ಸಾಧನಗಳು ಅಪಾಯಕಾರಿ ಎಂದು ಎಚ್ಚರಿಸಿದೆ. ಭದ್ರತಾ ಮತ್ತು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.