ಮುಚ್ಚುತ್ತಿದ್ದ ಮೆಡಿಕಲ್ ಶಾಪ್‌ಗೆ ನುಗ್ಗಿದ ಗ್ರಾಹಕ; ಕಳ್ಳನಲ್ಲ ಆತ, ಹೆಂಡತಿ ಬೈಗುಳಕ್ಕೆ ಹೆದರಿದ ಗಂಡ!

ವಿಯೆಟ್ನಾಂ: ವಿಯೆಟ್ನಾಂನಲ್ಲಿ ತಡರಾತ್ರಿ ಮೆಡಿಕಲ್ ಶಾಪ್ ಒಂದನ್ನು ಮುಚ್ಚುವ ಸಮಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಂಗಡಿಯ ಅರ್ಧ ಮುಚ್ಚಿದ್ದ ಶಟರ್ ಒಳಗೆ ವ್ಯಕ್ತಿಯೊಬ್ಬ ಓಡಿ ಬಂದಿರುವ ವಿಡಿಯೋ ವೈರಲ್ ಆಗಿದೆ. ಮೆಡಿಕಲ್ ಶಾಪ್ನಲ್ಲಿದ್ದ ಇಬ್ಬರು ಮಹಿಳೆಯರು ಮೊದಲು ಆತ ಕಳ್ಳನೆಂದು ಭಾವಿಸಿದ್ದರು. ಆದರೆ ಅವರಿಗೆ ಬೇಕಾದ ವಸ್ತುವನ್ನು ಕೊಂಡು ಹಣ ಕೊಟ್ಟಿದ್ದನ್ನು ನೋಡಿ ನಿರಾಳರಾಗಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿ ಕೆಲವು ವಸ್ತುಗಳನ್ನು ತರಲು ಮೆಡಿಕಲ್ ಶಾಪ್‌ಗೆ ಕಳುಹಿಸಿದ್ದರು. ಒಂದು ವೇಳೆ ಅಂಗಡಿ ಮುಚ್ಚಿ, ಆತ ಬರಿಗೈಲಿ ಮನೆಗೆ ಮರಳಿದರೆ ಪತ್ನಿ ಬೆಳಗ್ಗಿನವರೆಗೆ ಬೈದು ರಗಳೆ ಮಾಡುತ್ತಿದ್ದಳಂತೆ. ಹೆಂಡತಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ಆತ ಮುಚ್ಚುತ್ತಿದ್ದ ಅಂಗಡಿಯೊಳಗೆ ಆ ಸಾಹಸ ಮಾಡಿ ನುಗ್ಗಿದ್ದ. ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕೂಡ ನಗೆ ಚಟಾಕಿ ಹಾರಿಸಿದ್ದಾರೆ.
