ಕೊಚ್ಚಿ: ಜಾಹೀರಾತು ಶೂಟಿಂಗ್ ಸ್ಥಳ ಪರಿಶೀಲನೆಗೆ ಹೋಗಿದ್ದ ದೆಹಲಿ ಮಾಡೆಲ್ ಕ್ವಾರಿ ನೀರಿನಲ್ಲಿ ಮುಳುಗಿ ಸಾ*ವು!

ಕೊಚ್ಚಿ: ಬಟ್ಟೆ ಅಂಗಡಿಯೊಂದರ ಜಾಹೀರಾತು ಚಿತ್ರೀಕರಣದ ಸ್ಥಳ ಪರಿಶೀಲನೆಗಾಗಿ ಕೇರಳಕ್ಕೆ ಆಗಮಿಸಿದ್ದ ದೆಹಲಿ ಮೂಲದ ಯುವ ಮಾಡೆಲ್ ಗುರುವಾರ ಮಧ್ಯಾಹ್ನ ಪೆರುಂಬವೂರ್‌ನ ಕುರುಪ್ಪಂಪಾಡಿ ಬಳಿಯ ಪೆಟ್ಟಮಾಳದಲ್ಲಿರುವ ಕ್ವಾರಿಯ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಮಾಡೆಲ್ ದಿವ್ಯಾಂಶು ಜ್ಯೋಶಿ (26) ಎಂದು ಗುರುತಿಸಲಾಗಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ದಿವ್ಯಾಂಶು ಮತ್ತು ಅವರ ಸ್ನೇಹಿತ ಮಧ್ಯಾಹ್ನ 2.30 ರ ಸುಮಾರಿಗೆ ಕ್ವಾರಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ದಿವ್ಯಾಂಶು ಅವರು ಕ್ವಾರಿಯ ನೀರಿಗೆ ಇಳಿದಿದ್ದಾರೆ. ಆದರೆ, ಅನಿರೀಕ್ಷಿತವಾಗಿ ಕಾಲು ಜಾರಿ ನೀರು ಪಾಲಾಗಿದ್ದಾರೆ. ದಿವ್ಯಾಂಶು ನೀರಿಗೆ ಇಳಿಯುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಅವರ ಸ್ನೇಹಿತ, ಅವರು ಮುಳುಗುತ್ತಿರುವುದನ್ನು ಕಂಡು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣಾ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಕೂಬಾ ಡೈವರ್‌ಗಳ ನೆರವನ್ನು ಕೋರಲಾಗಿತ್ತಾದರೂ, ಅವರು ಸ್ಥಳಕ್ಕೆ ಬರುವ ಮೊದಲೇ ದಿವ್ಯಾಂಶು ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿತ್ತು. ಸುಮಾರು 100 ಅಡಿಗಳಷ್ಟು ಆಳವಿರುವ ಈ ಅತ್ಯಂತ ಅಪಾಯಕಾರಿ ಕ್ವಾರಿಯ 30 ಅಡಿ ಆಳದಲ್ಲಿ ದಿವ್ಯಾಂಶು ಅವರ ಮೃತದೇಹ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಪೆರುಂಬವೂರ್‌ನ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಕೊಡನಾಡು ಪೊಲೀಸರ ಪ್ರಕಾರ, ಚಾಲಕುಡಿ ಮೂಲದ ಜಾಹೀರಾತು ಚಿತ್ರೀಕರಣ ಘಟಕವು ಶುಕ್ರವಾರದಂದು ಸ್ಥಳಕ್ಕೆ ಭೇಟಿ ನೀಡಿ, ಶೂಟಿಂಗ್‌ಗಾಗಿ ಸ್ಥಳೀಯ ಪಂಚಾಯತ್‌ನಿಂದ ಅಧಿಕೃತ ಅನುಮತಿ ಪಡೆಯಲು ಯೋಜಿಸಿತ್ತು. ಆದರೆ, ದೆಹಲಿ ಮೂಲದ ಈ ಯುವಕರು ಒಂದು ದಿನ ಮುಂಚಿತವಾಗಿಯೇ ಯಾರ ಗಮನಕ್ಕೂ ತರದೆ ಸ್ಥಳವನ್ನು ಅನ್ವೇಷಿಸಲು ಬಂದಿದ್ದರು. ಸದ್ಯ ಕೊಡನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.