ಗುಜರಾತ್: ಕೇವಲ ₹2,000 ಬಾಡಿಗೆಗಾಗಿ ಹೆಂಡತಿ, ಮಗಳನ್ನು ಮಾಲೀಕನ ಕಾಮಕ್ರೀಡೆಗೆ ಒಪ್ಪಿಸಿದ ಪಾಪಿ ಪತಿ!

ಗುಜರಾತ್: 2000 ರೂಪಾಯಿ ಮನೆ ಬಾಡಿಗೆ ಕಟ್ಟಲಾಗದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು 13 ವರ್ಷದ ಅಪ್ರಾಪ್ತ ಮಗಳನ್ನು ಮನೆ ಮಾಲೀಕನ ಲೈಂಗಿಕ ದೌರ್ಜನ್ಯಕ್ಕೆ ಬಿಟ್ಟುಕೊಟ್ಟಿರುವ ಅತ್ಯಂತ ಆಘಾತಕಾರಿ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈ ಘೋರ ದೌರ್ಜನ್ಯದ ವಿರುದ್ಧ ಸಂತ್ರಸ್ತೆಯ ತಾಯಿ ಮೊರ್ಬಿ ನಗರದ ‘ಎ’ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸಂತ್ರಸ್ತೆಯ ಪತಿ, 55 ವರ್ಷದ ಮನೆ ಮಾಲೀಕ ಹಾಗೂ ಆತನ ಸಂಬಂಧಿಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೊ (POCSO) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಮಾರು ಆರು ತಿಂಗಳ ಹಿಂದೆಯಷ್ಟೇ ಈ ಕುಟುಂಬವು ಜೀವನೋಪಾಯಕ್ಕಾಗಿ ಮತ್ತು ಕೆಲಸದ ಹುಡುಕಾಟದಲ್ಲಿ ಗುಜರಾತ್‌ನ ಮೊರ್ಬಿಗೆ ವಲಸೆ ಬಂದಿತ್ತು. ಅಲ್ಲಿ ತಿಂಗಳಿಗೆ 2,000 ರೂಪಾಯಿ ನಿಗದಿಯಾಗಿದ್ದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪತಿಯ ವ್ಯಾಪಾರ ಸಂಪೂರ್ಣ ನಷ್ಟದಲ್ಲಿದ್ದರಿಂದ ಸಕಾಲದಲ್ಲಿ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗಿರಲಿಲ್ಲ. ದಿನ ಕಳೆದಂತೆ ಬಾಡಿಗೆ ಹಣದ ಬಾಕಿ ಮೊತ್ತ ಹೆಚ್ಚುತ್ತಾ ಹೋಗಿದ್ದು, ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.
ಹೆಚ್ಚುತ್ತಿದ್ದ ಬಾಡಿಗೆ ಹಣವನ್ನು ಭರಿಸಲು ಮತ್ತು ಮಾಲೀಕನ ಒತ್ತಡದಿಂದ ತಪ್ಪಿಸಿಕೊಳ್ಳಲು ಪತಿ ಅತ್ಯಂತ ನೀಚ ಮಾರ್ಗವನ್ನು ಆರಿಸಿಕೊಂಡಿದ್ದ. ಬಾಡಿಗೆ ಹಣದ ಬದಲಿಗೆ ತನ್ನ ಪತ್ನಿ ಹಾಗೂ 13 ವರ್ಷ ಪ್ರಾಯದ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು 55 ವರ್ಷದ ಮನೆ ಮಾಲೀಕ ಮತ್ತು ಆತನ ಸಂಬಂಧಿಕನಿಗೆ ಈತನೇ ದಾರಿ ಮಾಡಿಕೊಟ್ಟಿದ್ದ. ಆರೋಪಿಗಳು ತಾಯಿ ಮತ್ತು ಮಗಳ ಮೇಲೆ ಬಾಡಿಗೆ ಮನೆಯಲ್ಲಿ ಮಾತ್ರವಲ್ಲದೆ, ಮಾಲೀಕನ ಸ್ವಂತ ಮನೆ ಹಾಗೂ ‘ಟಂಕಾರಾ’ ಎಂಬ ಪ್ರದೇಶದಲ್ಲೂ ಹಲವು ಬಾರಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೇ 1 ರಂದು ದೂರು ದಾಖಲಾದ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕೃತ್ಯದ ಮುಖ್ಯ ಸೂತ್ರಧಾರಿಯಾಗಿರುವ ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ತದನಂತರ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು 55 ವರ್ಷದ ಮುಖ್ಯ ಆರೋಪಿ ಮನೆ ಮಾಲೀಕನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.