ಇರಾನ್‌ಗೆ ಟ್ರಂಪ್ ವಿನಾಶದ ಎಚ್ಚರಿಕೆ: ಚೀನಾ ಪ್ರವಾಸದ ಕೊನೆಯ ದಿನ ಅಮೆರಿಕ ಅಧ್ಯಕ್ಷರ ಅಬ್ಬರ!

ಬೀಜಿಂಗ್: “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಒಪ್ಪಂದಕ್ಕೆ ಬರಬೇಕು, ಇಲ್ಲವಾದರೆ ಸಂಪೂರ್ಣ ವಿನಾಶ ಎದುರಿಸಲು ಸಿದ್ಧವಾಗಬೇಕು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಟ್ರಂಪ್ ನೀಡಿರುವ ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡವನ್ನು ಇನ್ನಷ್ಟು ದಟ್ಟವಾಗಿಸಿದೆ.

ಚೀನಾ ಪ್ರವಾಸದ ಕೊನೆಯ ದಿನದ ಅಬ್ಬರ: ಮೂರು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಇಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್‌ನ ಅಣ್ವಸ್ತ್ರ ಹಂಬಲಕ್ಕೆ ಕಡಿವಾಣ ಹಾಕಲು ಅಮೆರಿಕ ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. “ಇರಾನ್ ಈಗ ಅಂತ್ಯದ ಹಂತದಲ್ಲಿದೆ. ಅವರು ಮಾತುಕತೆಯ ಮೂಲಕ ಒಪ್ಪಂದ ಮಾಡಿಕೊಳ್ಳಬಹುದು ಅಥವಾ ನಕ್ಷೆಯಿಂದಲೇ ನಾಶವಾಗಬಹುದು” ಎಂದು ನೇರ ಎಚ್ಚರಿಕೆ ನೀಡಿದರು.
ಚೀನಾದ ನಿಲುವು ಮತ್ತು ತೈಲ ರಾಜಕೀಯ: ಇರಾನ್‌ನ ಶೇ 90 ರಷ್ಟು ತೈಲವನ್ನು ಖರೀದಿಸುವ ಚೀನಾ, ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪನೆಯಾಗಲಿ ಎಂದು ಆಶಿಸಿದೆ. “ಅಮೆರಿಕದ ಜೊತೆ ಒಪ್ಪಂದವಾಗಲಿ ಎಂಬುದು ಕ್ಸಿ ಜಿನ್‌ಪಿಂಗ್ ಅವರ ಬಯಕೆ. ಈ ನಿಟ್ಟಿನಲ್ಲಿ ಸಹಾಯ ಮಾಡಲು ಅವರು ಸಿದ್ಧರಿದ್ದಾರೆ. ಇರಾನ್‌ಗೆ ಯಾವುದೇ ಸೈನಿಕ ನೆರವು ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ” ಎಂದು ಟ್ರಂಪ್ ತಿಳಿಸಿದರು.
ಸೈನಿಕ ಶಕ್ತಿಯ ಪ್ರದರ್ಶನ: ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಲೇವಡಿ ಮಾಡಿದ ಟ್ರಂಪ್, “ಅಮೆರಿಕದ ವಾಯುಪಡೆಯು ಇರಾನ್‌ನ ಪ್ರಮುಖ ಖಾರ್ಗ್ ದ್ವೀಪವನ್ನು ಕೇವಲ ಐದಾರು ನಿಮಿಷಗಳಲ್ಲಿ ಧ್ವಂಸಗೊಳಿಸಬಲ್ಲದು. ಅವರ ನೌಕಾಪಡೆ ಈಗಾಗಲೇ ನೆಲಕಚ್ಚಿದೆ. ಅವರು ಎಷ್ಟೇ ಪುನರ್ ನಿರ್ಮಾಣ ಮಾಡಿದರೂ ಅದನ್ನು ಒಂದೇ ದಿನದಲ್ಲಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ನಮಗಿದೆ” ಎಂದು ಸೈನಿಕ ಮುಖ್ಯಸ್ಥರ ವರದಿಯನ್ನು ಉಲ್ಲೇಖಿಸಿ ಎಚ್ಚರಿಸಿದರು.
ವ್ಯಾಪಾರ ಕ್ಷೇತ್ರದಲ್ಲಿ ಹೊಸ ಒಪ್ಪಂದ: ಇದೇ ವೇಳೆ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧದ ಬಗ್ಗೆ ಮಾತನಾಡಿದ ಟ್ರಂಪ್, ಚೀನಾವು ಅಮೆರಿಕದಿಂದ 200 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಸಮ್ಮತಿಸಿದೆ ಎಂದರು. ಟೆಕ್ಸಾಸ್ ಮತ್ತು ಅಲಾಸ್ಕಾದಿಂದ ತೈಲ ರಫ್ತು ಹಾಗೂ ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚಿಸುವ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದಿವೆ. ಕ್ಸಿ ಜಿನ್‌ಪಿಂಗ್ ಅವರನ್ನು ಶಕ್ತಿಶಾಲಿ ನಾಯಕ ಎಂದು ಶ್ಲಾಘಿಸಿದ ಟ್ರಂಪ್, ಹಾಲಿವುಡ್ ಚಿತ್ರಗಳಿಗಿಂತಲೂ ಅದ್ಭುತವಾಗಿ ಚೀನಾ ತಮಗೆ ಸೈನಿಕ ಗೌರವ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.