ಕೇಂದ್ರದ ಎಸ್ಐಆರ್ಗೆ ರಾಜ್ಯ ಸರ್ಕಾರದ ಚೆಕ್-ಮೇಟ್

ಎಸ್ಐಆರ್ ಎಂಬ ಪ್ರಬಲ ಅಸ್ತ್ರದ ನೆರವಿನೊಂದಿಗೆ ಬಿಜೆಪಿ ಎಲ್ಲಿ ಬೇಕಾದರೂ ಚುನಾವಣೆ ಗೆಲ್ಲಬಹುದು ಎಂಬ ಲೆಕ್ಕಾಚಾರದೊಂದಿಗೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಪ್ರಯೋಗಗಳ ಬಳಿಕ ಈಗ ದಕ್ಷಿಣ ಭಾರತದಲ್ಲೂ ಎಸ್ಐಆರ್ ವರಸೆ ತೋರಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಗ್ರಹಿಸಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಎಸ್ಐಆರ್ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಕಾರ್ಯತಂತ್ರ ರೂಪಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಪ್ರಗತಿಪರ ಸಂಘಟನೆಗಳೊಂದಿಗೆ ಶುಕ್ರವಾರ ಒಕ್ಕೂಟ ಸಭೆ ನಡೆಸಿದ್ದು, ಈ ವಿಚಾರದಲ್ಲಿ ತೀರಾ ತಡವಾಗುವ ಮುನ್ನವೇ ಎಚ್ಚೆತ್ತುಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯ ಚುನಾವಣಾ ಆಯೋಗದ ಮೂಲಕ ರಾಜ್ಯದಿಂದಲೇ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ.
ಈ ಹೊಸ ಯೋಜನೆಯ ಅಡಿಯಲ್ಲಿ, ಪ್ರತಿ ಪಂಚಾಯತ್ ಮಟ್ಟದಲ್ಲಿ ಬಿಎಲ್ಒ (BLO) ಗಳ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪಟ್ಟಿಯಿಂದ ಹೆಸರು ಕೈಬಿಡುವ ಹಾಗೂ ಹೊಸ ಹೆಸರುಗಳ ಸೇರ್ಪಡೆಯನ್ನು ಪಾರದರ್ಶಕವಾಗಿ ಮತ್ತು ಬಹಿರಂಗವಾಗಿ ಪ್ರಕಟಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾನೂನು ಬಲ ತಂದುಕೊಡಲು ರಾಜ್ಯ ಸರ್ಕಾರ ಬಯಸಿದೆ. ಈ ಮೂಲಕ ರಾಜ್ಯದಲ್ಲಿ ಉದ್ದೇಶಿತ ಎಸ್ಐಆರ್ ಪ್ರಕ್ರಿಯೆಯಿಂದ ಬಿಜೆಪಿ ವಿರೋಧಿ ಮತಬ್ಯಾಂಕ್ಗೆ ಯಾವುದೇ ಭಂಗ ಬಾರದಂತೆ ಎಚ್ಚರ ವಹಿಸುವ ಲೆಕ್ಕಾಚಾರಕ್ಕೆ ಸಭೆ ಬಂದಿದೆ ಎನ್ನಲಾಗಿದೆ. ಈ ಒಂದು ನಡೆ ಕೇಂದ್ರ ಸರ್ಕಾರದ ಎಸ್ಐಆರ್ ಯೋಜನೆಗೆ ರಾಜ್ಯ ಸರ್ಕಾರ ನೀಡಿದ ಪ್ರಬಲ ‘ಚೆಕ್-ಮೇಟ್’ ನಂತಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಬೆಚ್ಚಿಬಿದ್ದಿದೆ.
