ಡಚ್ ಕ್ರೂಸ್ ಹಡಗಿನಲ್ಲಿ ಹ್ಯಾಂಟವೈರಸ್ ಭೀತಿ: ಇಬ್ಬರು ಭಾರತೀಯ ಸಿಬ್ಬಂದಿ ನೆದರ್ಲ್ಯಾಂಡ್ಸ್ಗೆ ಸ್ಥಳಾಂತರ

ಮ್ಯಾಡ್ರಿಡ್: ಹ್ಯಾಂಟವೈರಸ್ ಸೋಂಕು ವರದಿಯಾದ ಡಚ್ ಕ್ರೂಸ್ ಹಡಗು ‘ಎಂವಿ ಹೊಂಡಿಯಸ್ನಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್ಲ್ಯಾಂಡ್ಸ್ ಗೆ ಸ್ಥಳಾಂತರಿಸಲಾಗಿದೆ ಎಂದು ಸ್ಪೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇಬ್ಬರೂ ಭಾರತೀಯ ಪ್ರಜೆಗಳು ಆರೋಗ್ಯವಾಗಿದ್ದು, ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ರಾಯಭಾರ ಕಚೇರಿ ‘ಎಕ್ಸ್’ ಖಾತೆಯಲ್ಲಿ ತಿಳಿಸಿದೆ.
‘ಸ್ಪೇನ್ ನ ರಾಷ್ಟ್ರೀಯ ತುರ್ತು ಮೇಲ್ವಿಚಾರಣೆ ಮತ್ತು ಸಮನ್ವಯ ಕೇಂದ್ರ (CENEM) ನೀಡಿದ ಮಾಹಿತಿಯಂತೆ, ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಭಾರತೀಯರನ್ನು ನೆದರ್ಲ್ಯಾಂಡ್ಸ್ ಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಸಂಬಂಧಿತ ಆರೋಗ್ಯ ಸುರಕ್ಷತಾ ನಿಯಮಾವಳಿಗಳ ಪ್ರಕಾರ ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

‘ಸ್ಪೇನ್ ಅಧಿಕಾರಿಗಳು ಹಾಗೂ ಇಬ್ಬರು ಭಾರತೀಯ ಸಿಬ್ಬಂದಿಯೊಂದಿಗೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ’ ಎಂದೂ ತಿಳಿಸಲಾಗಿದೆ.
ಪ್ರಯಾಣಿಕರ ಸಾಂಕ್ರಾಮಿಕ ರೋಗ ಮೌಲ್ಯಮಾಪನ ಹಾಗೂ ಚಾರ್ಟರ್ ವಿಮಾನಗಳ ವ್ಯವಸ್ಥೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರು ಸ್ಪೇನ್ ಆರೋಗ್ಯ ಸಚಿವಾಲಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು WHO ಮಹಾನಿರ್ದೇಶಕ ಟೆಟ್ರೊಸ್ ಅಧಾನಮ್ ಫೆಬ್ರೆಯಸಸ್ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಹಡಗಿನಿಂದ ಪ್ರಯಾಣಿಕರನ್ನು ಇಳಿಸುವ ಕಾರ್ಯಾಚರಣೆಯಲ್ಲಿ ಸೋಂಕು ನಿವಾರಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಪ್ರತಿಯೊಂದು ಹಂತದಲ್ಲೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ‘ಎಲ್ಲ ಪ್ರಯಾಣಿಕರೂ ರೋಗ ಲಕ್ಷಣ ರಹಿತರಾಗಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
ಹ್ಯಾಂಟ ವೈರಸ್ ಗಳು ಸಾಮಾನ್ಯವಾಗಿ ಸೋಂಕಿತ ಇಲಿಗಳು ಅಥವಾ ಅವುಗಳ ಲಾಲಾರಸ, ಮೂತ್ರ ಮತ್ತು ಮಲದ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತವೆ. ಗೋದಾಮುಗಳು, ಹಡಗುಗಳು, ಕೊಟ್ಟಿಗೆಗಳು ಹಾಗೂ ಗಾಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಇಲಿಗಳ ಮಲಮೂತ್ರದಿಂದ ಗಾಳಿಯಲ್ಲಿ ಹರಡುವ ವೈರಸ್ ಕಣಗಳನ್ನು ಉಸಿರಾಡುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.
ಹ್ಯಾಂಟವೈರಸ್ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ ಒಂದರಿಂದ ಎಂಟು ವಾರಗಳೊಳಗೆ ಕಾಣಿಸಿಕೊಳ್ಳುತ್ತವೆ. ಸೋಂಕು ವರದಿಯಾದ ಬಳಿಕ ಇದುವರೆಗೆ ಮೂವರು ಮೃತಪಟ್ಟಿದ್ದಾರೆ.