ಬ್ಯಾಂಕ್‌ನಲ್ಲಿ ಕನ್ನಡಕ್ಕಾಗಿ ಕೇಳಿದ ಗ್ರಾಹಕರಿಗೆ ಹಿಂದಿ ಸಿಬ್ಬಂದಿ ದರ್ಪ; ವಿಡಿಯೋ ವೈರಲ್!

ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಹಿಂದಿ ಭಾಷಿಕರು ಹಾಗೂ ಕೆಲವು ನಾರ್ಥಿಗಳ ಉಪಟಳ ಮುಂದುವರಿದಿದೆ. ಇದೀಗ ಕರ್ನಾಟಕದ ಪ್ರಮುಖ ಬ್ಯಾಂಕ್‌ವೊಂದರಲ್ಲಿ ಕನ್ನಡಿಗರು ಬ್ಯಾಂಕ್‌ನ ಸಿಬ್ಬಂದಿಗೆ ಕನ್ನಡದಲ್ಲಿ ವ್ಯವಹರಿಸಿ ಎಂದು ಕೇಳಿದರೆ, ದರ್ಪದಿಂದ ಪ್ರತಿಕ್ರಿಯೆ ನೀಡಿದ್ದಾರೆ.ಅಲ್ಲದೆ ಬೇಕಾದರೆ ಹೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ದೂರು ಕೊಡಿ ಅಂತ ಹೇಳಿರುವುದು ಸಹ ವೈರಲ್ ವಿಡಿಯೋದಲ್ಲಿದೆ.
ಕರ್ನಾಟಕದಲ್ಲಿ ಹಿಂದಿ ಹಾಗೂ ಅನ್ಯಭಾಷಿಕರು ದರ್ಪ ಮೆರೆಯುವುದು ಮುಂದುವರಿದಿದೆ. ಕೆಲವರು ಉದ್ದೇಶಪೂರ್ವಕವಾಗಿ ಕನ್ನಡ ಮಾತನಾಡಿದ್ದರೆ ಇನ್ನೂ ಕೆಲವರು ಕನ್ನಡ ಕಲಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಇದೀಗ ಕರ್ನಾಟಕದ ಪ್ರಮುಖ ಬ್ಯಾಂಕ್‌ವೊಂದರ ಸಿಬ್ಬಂದಿ ಸಂಪೂರ್ಣವಾಗಿ ಹಿಂದಿಯಲ್ಲೇ ಮಾತನಾಡಿದ್ದು, ಕನ್ನಡದಲ್ಲಿ ಮಾತನಾಡಿ ಎಂದರೆ ಆಗಲ್ಲ ಬೇಕಾದರೆ ನೀವು ಹೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ದೂರು ಕೊಡಿ ಅಂತ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ
ವೈರಲ್ ಆಗಿರುವ ವಿಡಿಯೋದಲ್ಲಿ ಕನ್ನಡದಲ್ಲಿ ವ್ಯವಹರಿಸುವಂತೆ ಕೇಳಿದರೆ ಸ್ಪಂದಿಸಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೈಲ್ ನೋಡಿ ಎಂದರೆ ನೋಡಲಿಲ್ಲ, ನಾನು ಹೇಳಿದೆ 1 ಗಂಟೆ ಆಗಲಿದೆ ಎಂದು ಹಿಂದಿಯಲ್ಲಿ ಸಿಬ್ಬಂದಿ ಹೇಳಿರುವುದು ಇದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ತಿಕ್ ಎನ್ನುವವರು, ಕರ್ನಾಟಕದಲ್ಲಿ ಆ ಬ್ಯಾಂಕ್ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಿ. ಅದು ಆ ಬ್ಯಾಂಕ್‌ನ ಸಂಪೂರ್ಣ ಭೌಗೋಳಿಕ ಮಾರುಕಟ್ಟೆಯ ನಷ್ಟವಾಗುತ್ತದೆ. ಅವರು ತಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದರೆ, ಅವರು ಆ ವ್ಯವಹಾರವನ್ನು ನಡೆಸಲು ಸಾಕಷ್ಟು ಯೋಗ್ಯರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಯ್ಯರ್ ಶ್ರೀಧರ್ ಎನ್ನುವವರು ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಸಬೇಕು ಎನ್ನುವ ವಿಷಯವು ಹದಗೆಡುತ್ತಿದೆ.
ಮೂಲಭೂತ ವಿಷಯವೆಂದರೆ ಒಬ್ಬ ಸಿಬ್ಬಂದಿ ನಿಯೋಜನೆಗೊಂಡರೆ ಆ ಪ್ರದೇಶದ ಸ್ಥಳೀಯ ಭಾಷೆಯನ್ನು ಕಲಿಯಬೇಕು. ಇದು ಮುಖ್ಯ ವಿಷಯ ಒಬ್ಬರು ಪ್ರವಾಸಿಗರಾಗಿದ್ದರೆ ನಮಗೆ ಅರ್ಥವಾಗುತ್ತದೆ. ಬ್ಯಾಂಕುಗಳ ವರ್ಗಾವಣೆ ನೀತಿಯನ್ನು ಪುನರ್ ವಿಮರ್ಶಿಸಲು ಮತ್ತು ತವರು ರಾಜ್ಯಕ್ಕೆ ಸೀಮಿತಗೊಳಿಸಲು ಇದು ಸಕಾಲ. ಇದು ಗ್ರಾಹಕರು ಮತ್ತು ಬ್ಯಾಂಕ್ ಉದ್ಯೋಗಿ ಇಬ್ಬರಿಗೂ ಸಹಾಯವಾಗಲಿದೆ ಎಂದಿದ್ದಾರೆ.
ಬ್ಯಾಂಕಿನಲ್ಲಿ ಗ್ರಾಹಕರಿಗೆ ತಪ್ಪು ತಿಳುವಳಿಕೆಯನ್ನು ತಪ್ಪಿಸಲು ಸ್ಥಳೀಯ ಭಾಷೆ ಮತ್ತು ಇತರ ಭಾಷೆಗಳನ್ನು ತಿಳಿದಿರುವ ಸಿಬ್ಬಂದಿಯನ್ನು ನೇಮಿಸುವುದು ಮುಖ್ಯವಾಗಿದೆ. ಸಿಬ್ಬಂದಿ ವರ್ಗಾವಣೆ ಮಾಡಬಹುದಾದ ಕೆಲಸಗಳಲ್ಲಿದ್ದಾರೆ ಮತ್ತು ಪ್ರತಿ 3-4 ವರ್ಷಗಳಿಗೊಮ್ಮೆ ಸ್ಥಳೀಯ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ ಎಂಬುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
