ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್: ಧ್ರುವ್ ಜುರೆಲ್ ಅಜೇಯ ಅರ್ಧಶತಕದ ಆಟ

ಗುವಾಹಟಿ: ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್ (78 ರನ್, 26 ಎಸೆತ, 8 ಬೌಂಡರಿ, 7 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಧ್ರುವ್ ಜುರೆಲ್ (ಔಟಾಗದೆ 81, 43 ಎಸೆತ, 8 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ಮಳೆ ಬಾಧಿತ 16ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹಾಲಿ ಚಾಂಪಿಯನ್ RCB ತಂಡವನ್ನು ಆರು ವಿಕೆಟ್ ಗಳ ಅಂತರದಿಂದ ಮಣಿಸಿತು.
ಈ ಮೂಲಕ ರಾಜಸ್ಥಾನ ಸತತ ನಾಲ್ಕನೇ ಗೆಲುವು ದಾಖಲಿಸಿತು. RCB ಮೊದಲ ಸೋಲು ಕಂಡಿತು.
ಗೆಲ್ಲಲು 202 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು.

ಯಶಸ್ವಿ ಜೈಸ್ಸಾಲ್ ಜೊತೆ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಜೈಸ್ವಾಲ್ 13 ರನ್ ಗಳಿಸಿ ಹೇಝಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಆಗ ಎರಡನೇ ವಿಕೆಟ್ಗೆ 108 ರನ್ ಜೊತೆಯಾಟ ನಡೆಸಿದ ಸೂರ್ಯವಂಶಿ ಹಾಗೂ ಜುರೆಲ್ ತಂಡವನ್ನು ಆಧರಿಸಿದರು.
ಸೂರ್ಯವಂಶಿ ಹಾಗೂ ಹೆಜ್ಜೆಯರ್ (0) ಕೃನಾಲ್ ಪಾಂಡ್ಯ ಬೌಲಿಂಗ್ ನಲ್ಲಿ ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ರಿಯಾನ್ ಪರಾಗ್ ಕೇವಲ 3 ರನ್ ಗಳಿಸಿ ಔಟಾದರು.
ಜುರೆಲ್ ಹಾಗೂ ರವೀಂದ್ರ ಜಡೇಜ (ಔಟಾಗದೆ 24, 25 ಎಸೆತ) ತಂಡವನ್ನು ಇನ್ನೂ ಎರಡು ಓವರ್ ಬಾಕಿ ಇರುವಾಗಲೇ ಗೆಲುವಿನತ್ತ ಮುನ್ನಡೆಸಿದರು.
RCB ತಂಡಕ್ಕೆ ವಾಪಸಾಗಿರುವ ವೇಗಿ ಜೋಶ್ ಹೇಝಲ್ವುಡ್ (2-44) ಹಾಗೂ ಕೃನಾಲ್ ಪಾಂಡ್ಯ (2-30) ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು.
ಇದಕ್ಕೂ ಮೊದಲು ಮಳೆಯಿಂದಾಗಿ ರಾತ್ರಿ 8 ಗಂಟೆಗೆ ನಡೆದ ಟಾಸ್ನಲ್ಲಿ ಗೆದ್ದ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
94 ರನ್ ಗೆ ಆರು ವಿಕೆಟ್ ಗಳನ್ನು ಕಳೆದುಕೊಂಡಿದ್ದ RCB ತಂಡವನ್ನು ನಾಯಕ ರಜತ್ ಪಾಟಿದಾರ್ ಅರ್ಧಶತಕ (63 ರನ್, 40 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ವೆಂಕಟೇಶ ಅಯ್ಯರ್ (ಔಟಾಗದೆ 29, 15 ಎಸೆತ) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲು ನೆರವಾಯಿತು.
ಇನಿಂಗ್ಸ್ನ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಫಿಲ್ ಸಾಲ್ಸ್ (0) ಔಟಾದರು. ಆಗ ಜೊತೆಯಾದ ವಿರಾಟ್ ಕೊಹ್ಲಿ 32 ರನ್, 16 ಎಸೆತ, 7 ಬೌಂಡರಿ) ಹಾಗೂ ದೇವದತ್ತ ಪಡಿಕ್ಕಲ್ (14 ರನ್, 7 ಎಸೆತ, 3 ಬೌಂಡರಿ) ಎರಡನೇ ವಿಕೆಟ್ಗೆ 45 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಈ ಇಬ್ಬರು ಬೇರ್ಪಟ್ಟ ನಂತರ RCB ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೃನಾಲ್ ಪಾಂಡ್ಯ 1 ರನ್), ಜಿತೇಶ್ ಶರ್ಮಾ (5 ರನ್) ಹಾಗೂ ಟಿಮ್ ಡೇವಿಡ್ (13 ರನ್) ಬೇಗನೆ ವಿಕೆಟ್ ಕೈಚೆಲ್ಲಿದರು.
ಇಂಪ್ಯಾಕ್ಸ್ ಪ್ಲೇಯರ್ ವೆಂಕಟೇಶ ಅಯ್ಯರ್ (ಔಟಾಗದೆ 29, 15 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಭುವನೇಶ್ವರ ಕುಮಾರ್ (ಔಟಾಗದೆ 9, 7 ಎಸೆತ) RCB ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ರಾಜಸ್ಥಾನದ ಪರವಾಗಿ ರವಿ ಬಿಷ್ಟೋಯಿ (2-32), ಜೋಫ್ರಾ ಆರ್ಚರ್ (2-33) ಹಾಗೂ ಬ್ರಿಜೇಶ್ ಶರ್ಮಾ (2-37) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
ರಾಜಸ್ಥಾನದ ಪಾಲಿಗೆ ಗುವಾಹಟಿ ಅದೃಷ್ಟದ ತಾಣವೆಂದು ಮತ್ತೊಮ್ಮೆ ಸಾಬೀತಾಗಿದ್ದು, ಈ ಮೈದಾನದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಜಯ ಗಳಿಸಿದೆ.
ರಾಜಸ್ಥಾನ ತಂಡವು ತುಷಾರ್ ದೇಶಪಾಂಡೆ ಅವರಿಗೆ ವಿಶ್ರಾಂತಿ ನೀಡಿ ಇನ್ನೋರ್ವ ವೇಗಿ ಬ್ರಿಜೇಶ್ ಶರ್ಮಾರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದೆ.
ಸಂಕ್ಷಿಪ್ತ ಸ್ಕೋರ್
RCB: 20 2 1 201/8
(ರಜತ್ ಪಾಟಿದಾರ್ 63. ವಿರಾಟ್ ಕೊಹ್ಲಿ 32. ವೆಂಕಟೇಶ ಅಯ್ಯರ್ ಔಟಾಗದೆ 29, ರೊಮಾರಿಯೊ ಶೆಫರ್ಡ್ 22, ರವಿ ಬಿಹೋಯಿ 2-16, ಬ್ರಿಜೇಶ್ ಶರ್ಮಾ 2-37, ಆರ್ಚರ್ 233)
ರಾಜಸ್ಥಾನ ರಾಯಲ್ಸ್: 18 ಓವರ್ ಗಳಲ್ಲಿ 202/4
(ವೈಭವ್ ಸೂರ್ಯವಂಶಿ 78, ಧ್ರುವ ಜುರೆಲ್ ಔಟಾಗದೆ 81. ರವೀಂದ್ರ ಜಡೇಜ ಔಟಾಗದೆ 24. ಕೃನಾಲ್ ಪಾಂಡ್ಯ 2-30, ಹೇಝಲ್ಕುಡ್ 2-44)