ಉಜ್ಜಯಿನಿ: ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಬಾಲಕ; ಸ್ಥಳದಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಬ್ಲಾಗರ್ ತಪ್ಪಿಲ್ ಝಲಾರಿಯಾ ಗ್ರಾಮದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕನನ್ನು ಭಗೀರಥ್ ಎಂದು ಗುರುತಿಸಲಾಗಿದೆ. ಈತ ಪ್ರವೀಣ್ ದೇವಸಿ ಎಂಬ ಕುರಿಗಾಹಿಯ ಪುತ್ರನಾಗಿದ್ದಾನೆ.
ಪ್ರವೀಣ್ ದೇವಸಿ ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ಪಾಳಿಯಿಂದ 3 ದಿನಗಳ ಹಿಂದೆ ಈ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ.
ಘಟನೆ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಬದ್ಘಾಗರ್ ಠಾಣಾಧಿಕಾರಿ ಅಶೋಕ್ ಪಾಟೀದಾರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬಾವಿಯೊಳಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
