“ಸಿಎಂ ಪೆಮಾ ಖಂಡು ಕುಟುಂಬಕ್ಕೆ 1,270 ಕೋಟಿ ರೂ. ಗುತ್ತಿಗೆ ನೀಡಿದ ಆರೋಪ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ”

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ 1,270 ಕೋಟಿ ರೂ. ಮೊತ್ತದ ವಿವಿಧ ಸಾರ್ವಜನಿಕ ಕಾಮಗಾರಿ ಗುತ್ತಿಗೆಗಳನ್ನು ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಿರುವ ಕುರಿತ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ನಿರ್ದೇಶನ ನೀಡಿದೆ.
“ನಾವು ಈ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸುತ್ತಿದ್ದೇವೆ. ಸ್ವತಂತ್ರ ತನಿಖೆ ಅಗತ್ಯವಿದೆಯೇ ಎಂಬುದರ ಕುರಿತು ಸಿಬಿಐ 16 ವಾರಗಳಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು” ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ರಾಜ್ಯದಲ್ಲಿ ಸರಕಾರಿ ಗುತ್ತಿಗೆಗಳನ್ನು ಸಿಎಂ ಖಂಡು ಮತ್ತು ಅವರ ಆಪ್ತ ಕುಟುಂಬ ಸದಸ್ಯರಿಗೆ ಕಾನೂನುಬಾಹಿರವಾಗಿ ನೀಡಲಾಗಿದೆ ಎಂದು ಆರೋಪಿಸಿ ಎನ್‌ಜಿಒಗಳಾದ ‘ಸೇವ್ ಮಾನ್ ರೀಜನ್ ಫೆಡರೇಶನ್ ಮತ್ತು ‘ವಾಲಂಟರಿ ಅರುಣಾಚಲ ಸೇನಾ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ಈ ಕುರಿತು ಎಸ್‌ಐಟಿ ತನಿಖೆಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.