ಫುಕೆಟ್ ರನ್ವೇನಲ್ಲಿ ಸಿಲುಕಿಕೊಂಡ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ: ಲ್ಯಾಂಡಿಂಗ್ ವೇಳೆ ಚಕ್ರ ಕಳಚಿದ ಅವಘಡ

ಫುಕೆಟ್ (ಥೈಲ್ಯಾಂಡ್): ಇಲ್ಲಿನ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದು ನೋಸ್ ಲ್ಯಾಂಡಿಂಗ್ ಮಾಡಿದ ಪರಿಣಾಮ, ಲ್ಯಾಂಡಿಂಗ್ ಗೇರ್ ಗೆ ಹಾನಿಯಾಗಿ ರನ್ ವೇ ನಲ್ಲಿಯೇ ಸಿಲುಕಿಕೊಂಡ ಘಟನೆ ನಡೆದಿದೆ.
ವಿಮಾನವು ಹೈದರಾಬಾದ್ ನಿಂದ ಬುಧವಾರ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆಯ ಪರಿಣಾಮ, ಹಲವಾರು ಗಂಟೆಗಳ ಕಾಲ ರನ್ವೇ ಮುಚ್ಚಬೇಕಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿದ್ದ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಲ್ಯಾಂಡಿಂಗ್ ವೇಳೆ ವಿಮಾನದ ನೋಸ್ ಲ್ಯಾಂಡಿಂಗ್ ಗೇರ್ ಹಾನಿಗೊಂಡಿದ್ದು, ಇದರಿಂದ ರನ್ವೇ ಮೇಲೆ ಹಾರ್ಡ್ ಟಚೌನ್ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ವಿಮಾನದ ತಪಾಸಣೆ ಮತ್ತು ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಮಯ ಸಂಜೆ 6 ಗಂಟೆಯವರೆಗೆ ರನ್ವೇ ಮುಚ್ಚಲಾಗಿತ್ತು ಎಂದು ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ವಿಮಾನಗಳ ಸಂಚಾರಕ್ಕೆ ರನ್ವೇ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವವರೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.