ಕೇರಳ ಇನ್ಮುಂದೆ ‘ಕೇರಳಂ’: ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಕೇರಳ ಸರ್ಕಾರದ ದೀರ್ಘಕಾಲದ ಬೇಡಿಕೆಯಂತೆ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಂಗಳವಾರ (ಫೆಬ್ರವರಿ 24) ಹಸಿರು ನಿಶಾನೆ ತೋರಿಸಿದೆ.

ಹೊಸ ಕಟ್ಟಡದಲ್ಲಿ ಮೊದಲ ಸಭೆ
ದೆಹಲಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಧಾನ ಮಂತ್ರಿ ಕಾರ್ಯಾಲಯದ (PMO) ಕಟ್ಟಡ ‘ಸೇವಾತೀರ್ಥ’ದಲ್ಲಿ ಜರುಗಿದ ಪ್ರಥಮ ಸಂಪುಟ ಸಭೆಯಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ವಿಶೇಷ

ವಿಧಾನಸಭೆಯ ನಿರ್ಣಯ
ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತಿದ್ದು, ಇದೇ ಹೆಸರನ್ನು ಸಂವಿಧಾನದ ಎಂಟನೇ ಅನುಸೂಚಿಯ ಎಲ್ಲಾ ಭಾಷೆಗಳಲ್ಲಿ ಅಳವಡಿಸಲು 2023 ಮತ್ತು 2024ರಲ್ಲಿ ಕೇರಳ ವಿಧಾನಸಭೆಯು ಒಮ್ಮತದ ನಿರ್ಣಯ ಅಂಗೀಕರಿಸಿತ್ತು.
ಚುನಾವಣಾ ಸಂದರ್ಭ
ಕೇರಳದಲ್ಲಿ ಈ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿರುವುದು ರಾಜಕೀಯವಾಗಿಯೂ ಕುತೂಹಲ ಮೂಡಿಸಿದೆ.
ಸಾಂಸ್ಕೃತಿಕ ಅಸ್ಮಿತೆ
ಬ್ರಿಟಿಷರ ಕಾಲದ ಹೆಸರನ್ನು ಕೈಬಿಟ್ಟು, ಮಲಯಾಳಂ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಪೂರಕವಾದ ಹೆಸರನ್ನು ಅಧಿಕೃತಗೊಳಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.