ಏರ್ ಆ್ಯಂಬುಲೆನ್ಸ್ ಪತನ; ವಿಮಾನದಲ್ಲಿದ್ದ ಏಳೂ ಮಂದಿ ದುರ್ಮರಣ

ಹೊಸದಿಲ್ಲಿ: ಜಾರ್ಖಂಡ್ ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ
ಅಪಘಾತದಲ್ಲಿ ರಾಂಚಿ-ದೆಹಲಿ ಏರ್ ಆ್ಯಂಬುಲೆನ್ನಲ್ಲಿದ್ದ ಎಲ್ಲ ಎಳು ಮಂದಿ ಮೃತಪಟ್ಟಿದ್ದಾರೆ. “ಅಪಘಾತಕ್ಕೀಡಾದ
ಏರ್ ಆ್ಯಂಬುಲೆನ್ಸ್ ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು”
ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ.
ರೆಡ್ ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್ ಆಗಿತ್ತು. 7.30ರ ವೇಳೆಗೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ವಿಮಾನ ಸಿಮಾರಿಯಾ ಬಳಿಯ ಬರಿಯಾಟ್ ಪಂಚಾಯ್ತಿ ಪ್ರದೇಶದಲ್ಲಿ ದಟ್ಟ ಕಾಡಿನ ಒಳಗೆ ಅಪಘಾತಕ್ಕೀಡಾಗಿತ್ತು.

ಮೃತಪಟ್ಟ ಎಲ್ಲ ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸೌರಜ್ದೀಪ್ ಸಿಂಗ್, ಸಂಜಯ್ ಕುಮಾರ್, ಡಾ.ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಮೃತಪಟ್ಟವರು ಎಂದು ಎಸ್ಡಿಪಿಓ ಶುಭಂ ಖಂಡೇವಾಲ್ ತಿಳಿಸಿದ್ದಾರೆ.
ರಾಡಾರ್ ಸಂಪರ್ಕದಿಂದ ಕಡಿದುಕೊಳ್ಳುವ ಮುನ್ನ ಈ ವಿಮಾನ ಕೊಲ್ಕತ್ತಾ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ರಾತ್ರಿ 7.34ಕ್ಕೆ ಸಂಪರ್ಕಿಸಿತ್ತು. ಹವಾಮಾನ ವೈಪರೀತ್ಯ ಪರಿಸ್ಥಿತಿಯಿಂದಾಗಿ ಬೇರೆ ಮಾರ್ಗವಾಗಿ ತೆರಳಲು ಮನವಿ ಮಾಡಿಕೊಂಡ ತಕ್ಷಣವೇ ಸಂಪರ್ಕ ಕಡಿತಗೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವರಿಸಿದೆ.
ಟೇಕಾಫ್ ಆದ 20 ನಿಮಿಷಗಳಲ್ಲಿ ವಿಮಾನ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಸಂಪರ್ಕ ಕಡಿದುಕೊಂಡಿತ್ತು ಎಂದು ರಾಂಚಿ ವಿಮಾನ ನಿಲ್ದಾಣ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ. ಪ್ರತಿಕೂಲ ಹವಾಮಾನ ದುರಂತಕ್ಕೆ ಕಾರಣವಾಗಿರಬೇಕು. ಆದರೆ ತನಿಖೆಯ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.