ಮಕ್ಕಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈಲ್ವೆ ಹಳಿಯಲ್ಲಿ ಮಲಗಿ ವೃದ್ಧ ದಂಪತಿ ಆತ್ಮಹ*ತ್ಯೆ

ಹಾಸನ: ಬದುಕು ಕೊಟ್ಟ ಅಪ್ಪ-ಅಮ್ಮನ ಬಗ್ಗೆ ಮಕ್ಕಳು ನಿರ್ಲಕ್ಷ್ಯ ವಹಿಸಿದ ಪರಿಣಾಮ, ತುತ್ತು ಊಟಕ್ಕೂ ಪರದಾಡಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ನಗರದ ಕರಿಗೌಡ ಕಾಲೊನಿಯಲ್ಲಿ ನಡೆದಿದೆ.

ಡೇನಿಯಲ್ ಮತ್ತು ಪತ್ನಿ ಮೇರಿ ಆತ್ಮಹತ್ಯೆ ಶರಣಾದ ವೃದ್ಧ ದಂಪತಿ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರೇಹೊಸೂರು ಗ್ರಾಮದ ಡೇನಿಯಲ್ ಎಂಬವರು ಮೇಸ್ತ್ರಿ ಕೆಲಸ ಮಾಡುತ್ತಿದ್ದು ಸುಮಾರು ಐವತ್ತು ವರ್ಷಗಳ ಹಿಂದೆ ಮೇರಿಯನ್ನು ವಿವಾಹವಾಗಿದ್ದರು. ನೆಲ್ಸನ್, ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಡೇನಿಯಲ್ ಕಷ್ಟಪಟ್ಟು ದುಡಿದು ಹಾರೇಹೊಸೂರಿನಲ್ಲಿ ಕಾಫಿ ತೋಟ, ಮನೆ ಸೇರಿದಂತೆ ಆಸ್ತಿ ಮಾಡಿ ಮಕ್ಕಳಿಗೆ ಒಳ್ಳೆಯ ಕಡೆ ಹೆಣ್ಣು ತಂದು ವಿವಾಹ ಮಾಡಿದ್ದರು. ನೆಲ್ಸನ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೆ ಮತ್ತೋರ್ವ ಮಗ ವಿಲ್ಸನ್ ಹಾರೇಹೊಸೂರಿನಲ್ಲಿ ಕಾಫಿ ತೋಟ ನೋಡಿಕೊಂಡಿದ್ದ. ಇತ್ತೀಚಿನ ಕೆಲವು ವರ್ಷಗಳಿಂದ ಇಬ್ಬರು ಮಕ್ಕಳು ವಯೋವೃದ್ಧ ತಂದೆ-ತಾಯಿಯನ್ನು ಆರೈಕೆ ಮಾಡಲು ನಿರ್ಲಕ್ಷಿಸಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಕೊಡುತ್ತಿರಲಿಲ್ಲ. ಅನಾರೋಗ್ಯವಾದರೆ ಆಸ್ಪತ್ರೆಗೆ ಕರೆದೊಯ್ಯದೆ ಮೃಗೀತ ವರ್ತನೆ ತೋರುತ್ತಿದ್ದರು.

ಮಕ್ಕಳ ನಿರ್ಲಕ್ಷ್ಯತನದಿಂದ ಬೇಸತ್ತ ವೃದ್ಧ ದಂಪತಿ ಕೆಲವು ದಿನಗಳಿಂದ ವಿರಾಜಪೇಟೆಯ ವೃದ್ಧಾಶ್ರಮಕ್ಕೆ ಸೇರಿದ್ದರು. ಆದರೆ, ಯಜಮಾನನಂತೆ ದುಡಿದು ಬದುಕಿ ಆಸ್ತಿ ಮಾಡಿ ಮಕ್ಕಳನ್ನು ಸಾಕಿ ಸಲುಹಿದ ದಂಪತಿಗೆ ವೃದ್ಧಾಶ್ರಮದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದ ದಂಪತಿ ಮೊನ್ನೆ ವೃದ್ಧಾಶ್ರಮದಿಂದ ಹೊರಟು ಸಾರಿಗೆ ಬಸ್‌ನಲ್ಲಿ ಆಗಮಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಇಳಿದು ರೈಲ್ವೆ ಟ್ರ‍್ಯಾಕ್ ಮೇಲೆ ಮಲಗಿ ರೈಲಿಗೆ ಸಿಲುಕಿ ದಾರುಣವಾಗಿ ಕೊನೆಯುಸಿರೆಳಿದಿದ್ದಾರೆ.
ನಿನ್ನೆ ಮಧ್ಯಾಹ್ನದ ನಂತರ ಮೃತ ದಂಪತಿ ಗುರುತು ಪತ್ತೆಯಾಗಿದ್ದು, ಮಕ್ಕಳಿಗೆ ವಿಷಯ ತಿಳಿಸಿದರೂ ಮೃತದೇಹಗಳನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ. ತಂದೆ ಮದ್ಯ ಸೇವಿಸುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಆ ಕಾರಣದಿಂದ ಅವರೇ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.